ಕಲಬುರಗಿ:ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ಎಸೆಗಿರುವ ಆರೋಪ ಎದುರಿಸುತ್ತಿರುವ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ನನ್ನು ಜಿಲ್ಲೆಯ ವಿಶೇಷ ಪೊಲೀಸ್ ತಂಡ ಶುಕ್ರವಾರ ಸಂಜೆ ಬಂಧಿಸಿದೆ. ಮಹಾರಾಷ್ಟ್ರದ ಸೋಲಾಪುರ ಬಳಿ ಆತನನ್ನು ಬಂಧಿಸಲಾಗಿದ್ದು ರಾತ್ರಿ ಕಲಬುರಗಿಗೆ ಕರೆತರಲಾಗಿದೆ. ಬಂಧಿತ ಆರೋಪಿಯು ಎಫ್‌ಡಿಎ ಪರೀಕ್ಷಾ ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡಿ ಪರೀಕ್ಷೆ ಅಕ್ರಮ ಎಸಗಿರುವ ಆರೋಪದಲ್ಲಿ ಪೊಲೀಸರಿಗೆ ತಲೆನೋವಾಗಿದ್ದನು.
ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಆರ್‌ಡಿ ಪಾಟೀಲ್, ನವೆಂಬರ್ 6 ರಂದು ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ಹಿಂಭಾಗದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ. ಕಲಬುರಗಿ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದ. ಕೊನೆಗೂ ಪೊಲೀಸರು 7 ತಂಡ ರಚನೆ ಮಾಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ ಲಕ್ಷ ರೂಪಾಯಿಗೆ ಡೀಲ್ ಮಾಡಿ ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡಿದ್ದ ಆರೋಪ ಈತನ ಮೇಲಿದೆ. ಈ ಹಿನ್ನೆಲೆ ಪಾಟೀಲ್ ವಿರುದ್ಧ ಅಶೋಕ್ ನಗರ, ಗುಲ್ಬರ್ಗ ವಿವಿ ಠಾಣೆ ಮತ್ತು ಅಫಜಲಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಂಧನವಾಗಿರುವ ಪರೀಕ್ಷೆ ಅಕ್ರಮದ ರೂವಾರಿ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಲಿದ್ದಾರೆ.