ಕಲಬುರಗಿ:ಕೃತಕ ಅಭಾವ ಸೃಷ್ಟಿಸಿ ಯೂರಿಯಾ ರಸಗೊಬ್ಬರವನ್ನು ಎಂಆರ್ಪಿ ದರಕ್ಕಿಂತ ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಲಿಂಗರಾಜ ಸಿರಗಾಪೂರ ಆರೋಪಿಸಿದರು.
ರೈತ ಮುಖಂಡ ಲಿಂಗರಾಜು ಸರಗಾಪೂರ ಒಂದು ಚೀಲಕ್ಕೆ ಎಂಆರ್ಪಿ ದರ 266 ರೂಪಾಯಿ ಇದೆ. ಅದನ್ನು ಕಾಳಸಂತೆಯಲ್ಲಿ 500 ರೂಪಾಯಿಗೆ ಮಾರಲಾಗುತ್ತಿದೆ. ಬಿಲ್ಗಳಲ್ಲಿ ಮಾತ್ರ ಎಂಆರ್ಪಿ ದರ ನಮೂದಿಸಲಾಗುತ್ತದೆ. ಹೆಚ್ಚಿನ ಹಣ ಪಡೆದಿದ್ದಕ್ಕೆ ಪ್ರಶ್ನಿಸಿದರೆ ಯೂರಿಯಾ ಅಭಾವವಿದೆ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿ ಪ್ರತಿ ವರ್ಷವೂ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೂ, ಕೃಷಿ ಇಲಾಖೆ ಅಧಿಕಾರಿಗಳು ತಡೆಯುತ್ತಿಲ್ಲ. ಈಗಾಗಲೇ ರೈತರು ಅನೇಕ ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾನಿಯಾಗಿವೆ. ಆದರೆ, ರಸಗೊಬ್ಬರ ಅಂಗಡಿ ಮಾಲೀಕರು ಲೂಟಿಗೆ ನಿಂತಿದ್ದಾರೆ ಎಂದರು.
ಅನೇಕ ಕಡೆಗಳಲ್ಲಿ ರಾಜಾರೋಷವಾಗಿ ನಕಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ದುಬಾರಿ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.