ಕಲಬುರಗಿ:ಬೆಂಬಲ ಬೆಲೆಯೊಂದಿಗೆ ಹತ್ತಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಇರುವ ಕಾಟನ್ ಮಿಲ್ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ.
ಹತ್ತಿ ಖರೀದಿಯಲ್ಲಿ ಅಕ್ರಮ ಆರೋಪ: ಕಲಬುರಗಿ ರೈತರ ಪ್ರತಿಭಟನೆ - ಕಲಬುರಗಿ
ಬೆಂಬಲ ಬೆಲೆಯೊಂದಿಗೆ ಹತ್ತಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಟನ್ ಮಿಲ್ ಮುಂಭಾಗ ರೈತರು ಪ್ರತಿಭಟಿಸಿದ್ದಾರೆ.
![ಹತ್ತಿ ಖರೀದಿಯಲ್ಲಿ ಅಕ್ರಮ ಆರೋಪ: ಕಲಬುರಗಿ ರೈತರ ಪ್ರತಿಭಟನೆ ಕಲಬುರಗಿ ರೈತರ ಪ್ರತಿಭಟನೆ](https://etvbharatimages.akamaized.net/etvbharat/prod-images/768-512-7431579-thumbnail-3x2-mng.jpg)
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಜಿತ್ ಕಾಟನ್ ಮಿಲ್ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸರ್ಕಾರ 5,500 ರೂಪಾಯಿ ಬೆಂಬಲ ಬೆಲೆಯೊಂದಿಗೆ ಹತ್ತಿ ಖರೀದಿಸಲು ಮುಂದಾಗಿದೆ. ಈ ಸಂಬಂಧ ಎಪಿಎಂಸಿಯಿಂದ ರೈತರಿಗೆ ಟೋಕನ್ ವಿತರಣೆ ಮಾಡಲಾಗಿದೆ. ಆದರೆ, ಟೋಕನ್ ಪಡೆದವರಿಗೆ ಬಿಟ್ಟು ಬೇರೆಯವರ ಹತ್ತಿ ಖರೀದಿಸುತ್ತಿರುವ ಆರೋಪ ಕೇಳಿಬಂದಿದೆ.
ಕೆಲ ಪ್ರಭಾವಿ ವ್ಯಕ್ತಿಗಳು ನೇರವಾಗಿ ತೆರಳಿ ಹತ್ತಿ ಮಾರಾಟ ಮಾಡಿ ಬರುತ್ತಿರುವುದು ರೈತರನ್ನು ಆಕ್ರೋಶಕ್ಕೀಡಾಗುವಂತೆ ಮಾಡಿದೆ. ಒಂದು ಟ್ರ್ಯಾಕ್ಟರ್ನಲ್ಲಿ 25 ರಿಂದ 35 ಕ್ವಿಂಟಲ್ ಹತ್ತಿ ತುಂಬಿಕೊಂಡು ಬರಲಾಗುತ್ತಿದೆ. ಒಂದು ಟ್ರ್ಯಾಕ್ಟರ್ಗೆ ಒಂದು ಕ್ವಿಂಟಲ್ ವೇಸ್ಟೇಜ್ ತೆಗೆಯುತ್ತಿರುವ ಆರೋಪವೂ ಕೇಳಿಬಂದಿದೆ. ಕಾಟನ್ ಮಿಲ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಟೋಕನ್ ಪ್ರಕಾರವೇ ರೈತರ ಹತ್ತಿ ಖರೀದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.