ಕಲಬುರಗಿ:ಸೂಫಿ ಸಂತರ ನಾಡು ಕಲಬುರಗಿ. ಇಲ್ಲಿನ ಜನತೆ ಯಾವುದೇ ಧಾರ್ಮಿಕ ಘರ್ಷಣೆಗೆ ಆಸ್ಪದ ನೀಡದೇ ಉತ್ತಮ ಆಡಳಿತ ನಡೆಸಲು ಸಹಕರಿಸಿದರು ಎಂದು ಕಲಬುರಗಿಯಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್ ಜನತೆಗೆ ಅಭಿನಂದನೆ ಸಲ್ಲಿಸಿದರು.
ವರ್ಗಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್ಗೆ ಬೀಳ್ಕೊಡುಗೆ - ಬೀಳ್ಕೊಡುಗೆ
ಕಲಬುರಗಿಯಿಂದ ವರ್ಗಾವಣೆಯಾಗುತ್ತಿರುವ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್ ಅವರಿಗೆ ಜಿಲ್ಲಾಡಳಿತ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ವರ್ಗಾವಣೆಗೊಂಡಿರುವ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಿಸಲೂರಿಗೆ ನಾನು ಚಿರಋಣಿಯಾಗಿದ್ದೇನೆ. ಹಾಸನದಿಂದ ಮುಂಬಡ್ತಿ ಪಡೆದು ಬರುವಾಗ ಅಲ್ಲಿನ ಜನರು ನೀಡಿದ ಪ್ರೀತಿ ಇಂದು ಮರುಕಳಿಸಿದೆ. ಅಧಿಕಾರಶಾಹಿ ವ್ಯವಸ್ಥೆಯಲ್ಲಿರುವ ನಾವು ಜನಸಾಮಾನ್ಯರ ನೋವು ನಲಿವುಗಳಿಗೆ ತ್ವರಿತವಾಗಿ ಸ್ಪಂದಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಆರ್. ವೆಂಟೇಶ ಕುಮಾರ್ ಅಭಿಪ್ರಾಯಪಟ್ಟರು.
ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸಮಾರಂಭದಲ್ಲಿ ಅತಿಥಿಯಾಗಿದ್ದ ಬಿ. ಶರತ್ ಮಾತನಾಡಿ, ಸರ್ಕಾರವು ಜನತೆಗೆ ರೂಪಿಸುವ ಹತ್ತು-ಹಲವಾರು ಯೋಜನೆ, ಆಶ್ವಾಸನೆ, ಭರವಸೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸಲು ಎಲ್ಲ ಅಧಿಕಾರಿಗಳು ಬದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು.