ಕಲಬುರಗಿ: ನಿನ್ನೆ (ಶುಕ್ರವಾರ)ಯಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭಗೊಂಡಿದೆ. ಮೊದಲ ದಿನವೇ ಕಲಬುರಗಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸುದ್ದಿ ಹಾಗೂ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್ಎಸ್‌ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ 46,029 ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ 168 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯಂತ್ರದಿಂದ ಮುದ್ರಿಸಲಾದ ಹಾಲ್ ಟಿಕೆಟ್, ಪರೀಕ್ಷಾ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಸೇರಿದಂತೆ ನಕಲು ತಡೆಯಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಇಷ್ಟೊಂದು ಜಾಗೃತಿ ನಡುವೆಯೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಮೊದಲನೇ ದಿನ ಕನ್ನಡ ಪರೀಕ್ಷೆ ನಡೆದಿದ್ದು, ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಬದಲಾಗಿ ನಕಲಿ ಅಭ್ಯರ್ಥಿ ಹಾಜರಾಗಿ ಎಕ್ಸಾಂ ಬರೆದಿದ್ದಾನೆ.
ಕಲಬುರಗಿಯ ಅಂಬಿಕಾ ನಗರದಲ್ಲಿರುವ ವಿನಾಯಕ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಇಂತಹದೊಂದು ಪ್ರಕರಣ ನಡೆದಿದೆ. ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬದೋಲೆ ಶಾಲೆಗೆ ಭೇಟಿ ನೀಡಿದಾಗ ಅನುಮಾನಗೊಂಡು ತಪಾಸಣೆ ನಡೆಸಿದಾಗ ಅಭ್ಯರ್ಥಿ ಬದಲಾಗಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿರುವುದು ಪತ್ತೆಯಾಗಿದೆ. ಸಿಇಒ ಸೂಚನೆ ಮೇರೆಗೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿ ಹಾಗೂ ಪರೀಕ್ಷೆಗೆ ಹಾಜರಾದ ನಕಲಿ ವಿದ್ಯಾರ್ಥಿ ಇಬ್ಬರ ವಿರುದ್ಧವೂ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.