ಕಲಬುರಗಿ:ಜಿಲ್ಲೆಯ ಕೇರೂರು ಗ್ರಾಮದ ಬಳಿ ಇರುವ ಸಾಯ್ಲ್ ಕಾರ್ಖಾನೆಯಿಂದ ಹೊರ ಬಿಡಲಾಗುತ್ತಿರುವ ಕೆಮಿಕಲ್ ಮಿಶ್ರಿತ ನೀರಿನಿಂದ ರೈತರು ತೊಂದರೆಗೀಡಾಗಿದ್ದಾರೆ. ಕಾರ್ಖಾನೆಯ ಕಲುಷಿತ ನೀರು ಕುಡಿದು ಜಾನುವಾರುಗಳು ಸಾವಿಗೀಡಾಗುತ್ತಿವೆಯಂತೆ. ನೋಡಲು ಪಕ್ಕಾ ಪೆಟ್ರೋಲ್ ರೀತಿ ಇರುವ ಕಲುಷಿತ ನೀರು, ಹಳ್ಳಕ್ಕೆ ಸೇರುತ್ತಿದ್ದು ರೈತರು ತಲೆಕೆಡಿಸಿಕೊಂಡಿದ್ದಾರೆ.
ಸಾಯ್ಲ್ ಕಾರ್ಖಾನೆಯವರು ಮಣ್ಣು ಫಿಲ್ಟರ್ ಮಾಡಲು ಕೆಮಿಕಲ್ ಮಿಶ್ರಿತ ನೀರು ಬಳಸುತ್ತಾರೆ. ಬಳಿಕ ಫಿಲ್ಟರ್ ಮಾಡಿ ಉಳಿದ ನೀರನ್ನು ನೇರವಾಗಿ ಪಕ್ಕದ ಹಳ್ಳಕ್ಕೆ ಬಿಡುತ್ತಿದ್ದಾರೆ. ಇದರಿಂದ ಕೇರೂರು, ಕೇರೂರು ತಾಂಡ, ಆಲಗೂಡ್ ಸೇರಿ ಹಲವು ಊರಿನ ರೈತರಿಗೆ ಸಮಸ್ಯೆಯಾಗುತ್ತಿದೆ. ಕಲುಷಿತ ನೀರು ಹಳ್ಳಕ್ಕೆ ಬಿಡುತ್ತಿರುವುದರಿಂದ ಸುತ್ತ ಮುತ್ತಲಿನ ಹೊಲಗಳಲ್ಲಿ ಬೆಳೆದ ಕಬ್ಬು, ಹೆಸರು, ಉದ್ದು ಸೋಯಾಬಿನ್ ಮತ್ತಿತರ ಬೆಳೆಗಳು ಹಾಳಾಗಿವೆ. ಸುಮಾರು ಎರಡು ನೂರಕ್ಕೂ ಅಧಿಕ ಎಕರೆ ಭೂಮಿ ಸಂಪೂರ್ಣ ಹಾಳಾಗುತ್ತಿದೆ.