ಕಲಬುರಗಿ :ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಸಹೋದರ ಹನುಮಂತ ಕೂಡಲಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೊಡಲಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಂತಪ್ಪ ಕೂಡಲಗಿ, ಕೊಲೆ ಪ್ರಕರಣದ 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಹನುಮಂತ ಕೂಡಲಗಿ ಸಹೋದರ ಶಾಂತಪ್ಪ ಕೂಡಲಗಿ ದೂರಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಹಾಗೂ ಆತನ ಸಹೋದರ ಬಸವರಾಜ್ ಪಾಟೀಲ್ ಕೂಡ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು. ಅವರು ಜಿಲ್ಲೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಆದರೂ ಸಹ ಪೊಲೀಸರು ಅವರನ್ನು ಬಂಧಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ : ಬಿಜೆಪಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ವಿರುದ್ಧ ಎಫ್ಐಆರ್
ನರಿಬೋಳ ಕುಟುಂಬ ಅವರ ತಂದೆಯವರ ಕಾಲದಿಂದಲೂ ರಾಜಕೀಯವಾಗಿ ನಮ್ಮನ್ನು ತುಳಿಯಲು ಪ್ರಯತ್ನಿಸುತ್ತಿದೆ. ಈ ಹಿಂದೆ ಮಯೂರ ಗ್ರಾಮದ ಶಿವಲಿಂಗ ಭಾವಿಕಟ್ಟಿ ಅವರ ಕೊಲೆ ಕೂಡ ನರಿಬೋಳ ಕುಟುಂಬದವರೇ ಮಾಡಿಸಿದ್ದು ಎಂದು ಆರೋಪಿಸಿದರು.
ಶಾಂತಪ್ಪ ಕೂಡಲಗಿ ಮತ್ತು ಕುಟುಂಬಸ್ಥರಿಂದ ಗಂಭೀರ ಆರೋಪ ದೊಡ್ಡಪ್ಪಗೌಡ ನರಿಬೋಳ್ ಕುಟುಂಬ ತಮ್ಮ ಎದುರು ಯಾರೂ ಸಹ ರಾಜಕೀಯವಾಗಿ ಬೆಳೆಯಬಾರದು ಎಂಬ ದುರುದ್ದೇಶವನ್ನು ಹೊಂದಿದೆ. ನನ್ನ ತಮ್ಮನ ಕೊಲೆಗೂ ನೇರವಾಗಿ ಅವರೇ ಕಾರಣರಾಗಿದ್ದಾರೆ. ನನಗೂ ಸಹ ಜೀವ ಭಯ ಕಾಡುತ್ತಿದೆ, ನನಗೆ ಏನಾದ್ರು ಆದರೆ ಅವರೇ ನೇರ ಹೊಣೆ ಎಂದರು.
ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳಾದ ದೊಡ್ಡಪ್ಪಗೌಡ ಪಾಟೀಲ್, ಬಸವರಾಜ್ ಪಾಟೀಲ್ ಹಾಗೂ ಸುಪಾರಿ ಪಡೆದು ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಎಸ್ಪಿ ಕಚೇರಿಯ ಎದುರು ಹೋರಾಟ ನಡೆಸುವುದಾಗಿ ಶಾಂತಪ್ಪ ಕೂಡಲಗಿ ಎಚ್ಚರಿಕೆ ರವಾನಿಸಿದರು.
ಓದಿ : ಭೀಮಾ ತೀರದಲ್ಲಿ ಮುಗಿಯದ ರಕ್ತ ಚರಿತೆ: ಜಿ.ಪಂ ಮಾಜಿ ಸದಸ್ಯನ ಸಹೋದರನ ಬರ್ಬರ ಹತ್ಯೆ