ಸೇಡಂ :ಸೇಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 35 ಗ್ರಾಮ ಪಂಚಾಯತ್ಗಳ ಪೈಕಿ 24 ಪಂಚಾಯತ್ಗಳಲ್ಲಿ ಪೂರ್ಣ ಬಹುಮತದಿಂದ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸೇಡಂ ತಾಲೂಕಿನ 27 ಗ್ರಾಮ ಪಂಚಾಯತ್ಗಳ ಪೈಕಿ 18ರಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ. ಬಿಜೆಪಿಯವರು ಈ ಬಾರಿಯ ಚುನಾವಣೆಯಲ್ಲಿ ಮುಗ್ಗರಿಸಿದರೂ, ಬಹುತೇಕ ಗ್ರಾಪಂಗಳಲ್ಲಿ ಅಧಿಕಾರ ಹಿಡಿಯುವ ಮಾತಾಡಿರುವುದು ಹಾಸ್ಯಾಸ್ಪದ ಎಂದರು.
ಗ್ರಾಪಂ ಚುನಾವಣೆ ಕುರಿತಂತೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪ್ರತಿಕ್ರಿಯೆ ನೀಡುತ್ತಿರುವುದು.. ಕಾಂಗ್ರೆಸ್ ಬೆಂಬಲಿತ 338 ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಕೇವಲ 218 ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ತಾಲೂಕಿನ ರಂಜೋಳ, ಸಿಂಧನಮಡು, ಬಟಗೇರಾ, ಕೋಡ್ಲಾ, ಊಡಗಿ, ನೀಲಹಳ್ಳಿ, ಯಡಗಾ, ಕುಕ್ಕುಂದಾ, ಮದಕಲ, ಲಿಂಗಂಪಲ್ಲಿ, ರಿಬ್ಬನಪಲ್ಲಿ, ಕಾನಾಗಡ್ಡಾ, ಚಂದಾಪೂರ, ದುಗನೂರ, ಕೋಲಕುಂದಾ, ಸಿರೊಳ್ಳಿ, ಕೆರೊಳ್ಳಿ, ಕುಪನೂರ, ಗಡಿಕೇಶ್ವಾರ ಗ್ರಾಪಂ ಸೇರಿದಂತೆ ಇನ್ನೂ ಕೆಲವೆಡೆ ಕಾಂಗ್ರೆಸ್ ಬೆಂಬಲಿತು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು. ಸೋತವರೂ ಕೂಡ ಎದೆಗುಂದದೆ ಜನರ ಸೇವೆಗೆ ಮುಂದಾಗಬೇಕು. ಮುಂಬರುವ ದಿನಗಳಲ್ಲಿ ನೂತನ ಸದಸ್ಯರಿಗೆ ಕ್ಷೇತ್ರದ ಅಭಿವೃದ್ಧಿಯ ಕುರಿತು ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಓದಿ : ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು : ಗಜಾನನ ಮಂಗಸೂಳಿ ಹರ್ಷ
ಸೇಡಂ ಶಾಸಕರ ದುರಾಡಳಿತ, ಭ್ರಷ್ಟಾಚಾರ, ಕ್ರಿಕೆಟ್ ಬೆಟ್ಟಿಂಗ್, ಜೂಜು ಅಡ್ಡೆ, ಮಟ್ಕಾ, ಮರಳುಗಾರಿಕೆಗೆ ರೋಸಿ ಹೋದ ಜನ ಕಾಂಗ್ರೆಸ್ ಮೇಲೆ ಒಲವು ತೋರುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಈಗ ಸುಳ್ಳು ಪೊಳ್ಳು ಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ. ಪೊಲೀಸರ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರ ರಾವ್ ಮಾಲಿಪಾಟೀಲ, ವಿಶ್ವನಾಥರೆಡ್ಡಿ ಪಾಟೀಲ, ಅಬ್ದುಲ್ ಗಫೂರ್, ಸಂತೋಷ್ ತಳವಾರ, ಶರಣರೆಡ್ಡಿ, ಜಗನ್ನಾಥ ಪಾಟೀಲ್, ನರೇಂದ್ರರೆಡ್ಡಿ ಪಾಟೀಲ್, ಯೂನುಸ್, ವಿಲಾಸ್ ಗೌತಂ ನಿಡಗುಂದಾ, ಪ್ರಶಾಂತ ಸೇಡಂಕರ್ ಇದ್ದರು.