ಕಲಬುರಗಿ:ಬಿಸಿಲಿನ ತಾಪಕ್ಕೆ ಹೆಸರುವಾಸಿಯಾದ ಕಲಬುರಗಿ ಜಿಲ್ಲೆ ಈಗ ಅಕ್ಷರಶಃ ಮಲೆನಾಡಿನ ವಾತಾವರಣದಂತೆ ಭಾಸವಾಗುತ್ತಿದೆ. ಕಳೆದೊಂದು ವಾರದಿಂದ ಅಬ್ಬರದ ಮಳೆಯಾಗಿದೆ. ಜೊತೆಗೆ ಮಹಾರಾಷ್ಟ್ರ, ತೆಲಂಗಾಣದಲ್ಲಿ ಸುರಿದಿದ್ದ ಭಾರಿ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ತಂಪಿನ ವಾತಾವರಣ ಕಂಡುಬರುತ್ತಿದೆ. ಚಿಂಚೋಳಿ ತಾಲೂಕಿನ ಎತ್ತಿಪೋತಾ ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯಷ್ಟು ಚಿಕ್ಕಪುಟ್ಟ ಜಲಪಾತಗಳು ಇವೆ. ಬೆಸಿಗೆಯಲ್ಲಿ ಇವು ಸೊರಗಿ ಹೋಗುತ್ತವೆ. ಮಳೆಗಾಲದಲ್ಲಿ ಈ ಭಾಗದ ಕೆಲವೊಂದು ಜಲಪಾತಗಳು ಕಣ್ಮನ ಸೆಳೆಯುತ್ತವೆ. ಇವುಗಳ ಪಟ್ಟಿಯಲ್ಲಿರುವ ಚಂದ್ರಂಪಳ್ಳಿ ಡ್ಯಾಮ್ ಸಮೀಪದ ಎತ್ತಿಪೋತಾ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಜಲಪಾತಗಳ ಸುಂದರ ದೃಶ್ಯಗಳನ್ನು ವೀಕ್ಷಿಸಲು ಮಲೆನಾಡಿಗೆ ಹೋಗುತ್ತಿದ್ದ ಜನರು, ಸದ್ಯ ತಮ್ಮ ಊರಿನಲ್ಲಿಯೇ ಭೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಲಬುರಗಿಯಿಂದ 125 ಕಿ.ಮೀ. ದೂರದಲ್ಲಿದೆ ಎತ್ತಿಪೋತಾ ಜಲಪಾತ:ಚಿಂಚೋಳಿ ತಾಲೂಕಿನಲ್ಲಿರುವ ಎತ್ತಿಪೋತಾ ಜಲಪಾತವು, ಜಿಲ್ಲಾ ಕೇಂದ್ರ ಕಲಬುರಗಿಯಿಂದ 125 ಕಿ.ಮೀ. ದೂರದಲ್ಲಿದೆ. ಚಿಂಚೋಳಿ ತಾಲೂಕಿನ ಕುಂಚಾವರಂನಿಂದ 10 ಕಿ.ಮೀ. ದೂರದಲ್ಲಿದೆ. ಗೋಪುನಾಯಕ ತಾಂಡಾ- ಸಂಗಾಪುರ ರಸ್ತೆಯಲ್ಲಿಯೇ ಇದು ಕಂಡುಬರುತ್ತದೆ. ತೆಲಂಗಾಣದಿಂದ ಹರಿದ ನೀರಿನಿಂದ ಕರ್ನಾಟಕ - ತೆಲಂಗಾಣ ಗಡಿಯಲ್ಲಿ ಎತ್ತಿಪೋತ ಜಲಪಾತ ಮೈದಳೆಯುತ್ತದೆ. ತೆಲುಗಿನಲ್ಲಿ ಎತ್ತಿಪೋತ ಎಂದರೆ ಮೇಲಿಂದ ಕೆಳಗೆ ಬೀಳುವುದು ಎನ್ನಲಾಗುತ್ತದೆ. ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಎತ್ತಿಪೋತಾ ಜಲಪಾತಕ್ಕೆ ಮುಂಗಾರು ಮಳೆಯಿಂದ ಜೀವಕಳೆ ಬಂದಿದೆ. ಕರಿ ಕಲ್ಲಿನಲ್ಲಿ ಕೆಂಪು ನೀರು ಎತ್ತರದಿಂದ ಬೀಳುವ ದೃಶ್ಯ ರಮ್ಯವಾಗಿದೆ.