ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಯ ಬೀಗಮುರಿದು ಮೊಹರಂ ಕಮಿಟಿಯವರು ಕೆಲವು ತಿಂಗಳ ಹಿಂದೆ ರಾತೋರಾತ್ರಿ ಅನಧಿಕೃತವಾಗಿ ಮಜರ್ ಸ್ಥಾಪಿಸಿದ್ದರು. ಇದು ಕೋಮುಘರ್ಷಣೆ ನಾಂದಿಗೂ ಕಾರಣವಾಗಬಹುದೆಂದು ಎಚ್ಚೆತ್ತ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರು, ಶಾಲೆಯ ಮುಖ್ಯ ಶಿಕ್ಷಕ, ಪೊಲೀಸರ ಸಮ್ಮುಖದಲ್ಲಿ ಮಜರ್ ಅನ್ನು ಶನಿವಾರ ತೆರವುಗೊಳಿಸಿದ್ದಾರೆ. ವಿವಾದಕ್ಕೊಳಗಾಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಮಜರ್ ತೆರವಿನಿಂದ ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ.
ಘಟನೆ ವಿವರ ?ಬಂದರವಾಡ ಗ್ರಾಮದ ಬಸವೇಶ್ವರ ಚೌಕ್, ಡಾ.ಬಿ ಆರ್ ಅಂಬೇಡ್ಕರ್ ಚೌಕ್, ಶಾಲೆ ಎದುರು ಇರುವ ಲಾಲಸಾಬ್ ಮಸೀದಿಯಲ್ಲಿ ಸುಮಾರು ವರ್ಷಗಳಿಂದ ಅನಧಿಕೃತವಾಗಿ ಮೊಹರಂ ಮಜರ್ ಸ್ಥಾಪಿಸಲಾಗಿತು. ಇದು ಸರ್ಕಾರಿ ಭೂಮಿ ಆಗಿದ್ದರಿಂದ ಗ್ರಾಪಂ ಆಡಳಿತವು ಎರಡು ತಿಂಗಳು ಹಿಂದೆ ಸೆಪ್ಟಂಬರ್ನಲ್ಲಿ ಮೊಹರಂ ಮಜರ್ ಸಹಿತ ಮಸೀದಿ ತೆರವುಗೊಳಿಸಿತು. ಆ ವೇಳೆ ಬೇರೆ ಕಡೆಗೆ ಮೊಹರಂ ಮಜರ್ ಒಯ್ಯಲಾಗದೇ, ಮೊಹರಂ ಕಮೀಟಿಯ ಕೆಲವರು ಸೆಪ್ಟೆಂಬರ್ 7 ರ ರಾತೋರಾತ್ರಿ ಪ್ರಾಥಮಿಕ ಶಾಲೆಯ ಕೊಠಡಿ ಬೀಗಮುರಿದು ಮಜರ್ ಸ್ಥಾಪಿಸಿ, ಬೀಗ ಹಾಕಿಕೊಂಡು ಹೋಗಿದ್ದರು. ಇದನ್ನು ಗಮನಿಸಿದ್ದ ಗ್ರಾಮಸ್ಥರು ತಕ್ಷಣ ಮೊಹರಂ ಮಜರ್ ತೆರವುಗೊಳಿಸಬೇಕೆಂದು ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದ ಪಂಚಾಯ್ತಿ, ತಹಶಿಲ್ದಾರ್, ಜಿಲ್ಲಾಡಳಿತಕ್ಕೆ ಮಜರ್ ತೆರವುಗೊಳಿಸುವಂತೆ ಗ್ರಾಮಸ್ಥರು ದೂರು ನೀಡಿದರೂ, ಕ್ರಮಕ್ಕೆ ಮುಂದಾಗಿರಲಿಲ್ಲ.