ಕಲಬುರಗಿ: ಮಹಾರಾಷ್ಟ್ರ ಮೈತ್ರಿ ಸರ್ಕಾರ ಪತನದ ಕುರಿತು ಉದ್ದವ್ ಠಾಕ್ರೆ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ಶಿವಸೇನೆ ಶಾಸಕರನ್ನ ಹೈಜಾಕ್ ಮಾಡಲಾಗಿದೆ ಎಂಬ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹೆಂಡತಿಯನ್ನ ಕಂಟ್ರೋಲ್ ಮಾಡೋಕೆ ಆಗದಿದ್ದರೆ ಓಡಿಹೋಗ್ತಾರೆ ಎಂದಿದ್ದಾರೆ.
ಯಾವ ಪಕ್ಷದಲ್ಲಿ ಶಿಸ್ತು, ನಾಯಕತ್ವ ಇರುವುದಿಲ್ಲವೋ, ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯಲ್ಲ. ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನಕ್ಕಾಗಿ ಠಾಕ್ರೆ ಮಗ ಹಿಂದುತ್ವವನ್ನೇ ಮಾರಾಟ ಮಾಡಿದರು. ನಾನಂತೂ ಹಿಂದುತ್ವ ಬಿಟ್ಟು ಬದುಕುವುದಿಲ್ಲ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಮೋದಿ ವಿಶ್ವ ನಾಯಕ: ನರೇಂದ್ರ ಮೋದಿಯವರನ್ನ ಕೊಲ್ಲಬೇಕು ಅಂತಾ ಸಾಕಷ್ಟು ಭಯೋತ್ಪಾದಕು ಸಂಚು ರೂಪಿಸಿದ್ದಾರೆ. ಹೈದರಾಬಾದ್‌ನಲ್ಲಿ ಮೋದಿಯವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ದೇಶದ 135 ಕೋಟಿ ಜನರ ಆಶೀರ್ವಾದ ಎಲ್ಲಿಯವರೆಗೆ ಮೋದಿ ಮೇಲೆ ಇರುತ್ತೋ ಅಲ್ಲಿಯವರೆಗೆ ಮೋದಿಯವರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮೋದಿ ಕೇವಲ ಭಾರತದ ಪ್ರಧಾನಿಯಲ್ಲ. ಇಡಿ ವಿಶ್ವದ ನಾಯಕ ಅಂತಾ ಹಿಂದೂ, ಮುಸ್ಲಿಂ, ಕ್ರೈಸ್ತರು ಸಹ ಒಪ್ಪಿಕೊಂಡಿದ್ದಾರೆ ಎಂದರು.
ಹರ್ಷನ ಕೊಲೆ ದುರಾದೃಷ್ಟ: ಹರ್ಷನ ಕೊಲೆ ಒಂದು ದುರಾದೃಷ್ಟ, ಹಿಂದೂ ಧರ್ಮದ ರಕ್ಷಣೆಗಾಗಿ ಇಡೀ ಜೀವನವನ್ನೇ ಬ್ರಹ್ಮಚಾರಿಯಾಗಿ ಕಳೆದಿದ್ದಾನೆ. ಇದರ ಬಗ್ಗೆ ಗೃಹ ಸಚಿವರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತನಿಖೆ ನಡೆಯುತ್ತಿದೆ. ಇಡೀ ದೇಶದ ಜನ ರಾಷ್ಟ್ರಪ್ರೇಮಿಗಳಾಗಬೇಕು ಅನ್ನೋದು ನನ್ನಾಸೆ. ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಖುಷಿ ಪಡೋರು ಮೊದಲು ಕಾಂಗ್ರೆಸ್ನವರು: ಸಚಿವ ಸೋಮಶೇಖರ್
ಸಿದ್ದರಾಮಯ್ಯ ವಿರುದ್ಧ ಕಿಡಿ:ಸಿದ್ದರಾಮಯ್ಯ ಹರ್ಷನ ಕೊಲೆ ಎಂದಿಗೂ ಖಂಡಿಸಲಿಲ್ಲ. ಮುಸಲ್ಮಾನರನ್ನ ವೈಭವಿಕರಿಸುವ ನಾಟಕವನ್ನ ಹಿಂದೂ ಸಂಘಟನೆಗಳು ಸ್ಥಗಿತಗೊಳಿಸಿದ್ದನ್ನು ಅವರು ಖಂಡಿಸಿದ್ರು. 75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನ ಸಹಿಸಿಕೊಂಡಿದ್ದೇವೆ. ಮಹ್ಮದ್ ಪೈಗಂಬರ್‌ರನ್ನ ಅಪಮಾನ ಮಾಡಿದ್ದಕ್ಕೆ ಇಡೀ ವಿಶ್ವದೆಲ್ಲಡೆ ಮುಸಲ್ಮಾನರ ಪ್ರತಿಭಟನೆ ವ್ಯಕ್ತವಾಗಿತ್ತು. ಇದೀಗ ಕಾಳಿದೇವಿ ಬಾಯಲ್ಲಿ ಸಿಗರೇಟು ಇಟ್ಟಿದ್ದರ ಬಗ್ಗೆ ಯಾಕೆ ಖಂಡನೆ ವ್ಯಕ್ತವಾಗಿಲ್ಲ. ಈ ವಿಚಾರಕ್ಕೆ ಸಿದ್ದರಾಮಯ್ಯ ಯಾಕೆ ಖಂಡನೆ ವ್ಯಕ್ತ ಮಾಡಿಲ್ಲ? ಸೋನಿಯಾ ರಾಹುಲ್ ಯಾಕೆ ಪ್ರತಿಕ್ರಿಯೆ ನೀಡಿಲ್ಲ? ಎಂದು ಪ್ರಶ್ನಿಸಿದರು.