ಸೇಡಂ:ಒಂದೆಡೆ ಸರ್ಕಾರ ಹಸಿರನ್ನೇ ಉಸಿರಾಗಿಸಲು ಕರೆ ನೀಡುತ್ತದೆ. ಇನ್ನೊಂದೆಡೆ ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಒಡಲಿಗೆ ಕೊಡಲಿ ಪೆಟ್ಟು ನೀಡುತ್ತಲೇ ಬಂದಿದೆ. ಇಂತದೊಂದು ಘಟನೆಗೆ ಇದೀಗ ಸೇಡಂ ಸಾಕ್ಷಿಯಾಗಿದೆ.
ಕೆಲ ವರ್ಷಗಳ ಹಿಂದೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕಪಕ್ಕದಲ್ಲಿ ನೂರಾರು ಸಸಿಗಳನ್ನು ನೆಡಲಾಗಿತ್ತು. ಅವು ಮರವಾಗಿ ಬೆಳೆದು ನಿಂತಿದ್ದು, ಇಡೀ ವಾತಾವರಣ ಹಸಿರುಮಯವಾಗಿತ್ತು. ವಾತಾವರಣಕ್ಕೆ ಮನಸೋತ ನೂರಾರು ಜನ ಕಾಲೇಜಿನ ರಸ್ತೆಯನ್ನು ವಾಕಿಂಗ್ ಸ್ಟ್ರೀಟ್ ಆಗಿ ಬಳಸಿಕೊಳ್ಳುತ್ತಿದ್ದರು. ನಸುಕಿನ ಜಾವ ಮತ್ತು ಸಂಜೆ ವಾಯು ವಿಹಾರಕ್ಕೆ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದರು. ಆದರೀಗ ರಸ್ತೆ ನಿರ್ಮಾಣದ ಹೆಸರಲ್ಲಿ ನೂರಾರು ಗಿಡ, ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.
ಅಭಿವೃದ್ಧಿ ಹೆಸರಲ್ಲಿ ನೂರಾರು ಮರಗಳಿಗೆ ಕೊಡಲಿ ಪೆಟ್ಟು ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಗುತ್ತಿಗೆದಾರರು ಜೆಸಿಬಿ ಮೂಲಕ ಮರಗಳ ಮಾರಣಹೋಮ ನಡೆಸಿದ್ದಾರೆ. ಈ ರೀತಿಯ ಗುತ್ತಿಗೆದಾರನ ನಡೆ ಪ್ರಕೃತಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಇದೇ ರಸ್ತೆ ಮಿನಿ ವಿಧಾನಸೌಧ, ತೋಟಗಾರಿಕೆ ಇಲಾಖೆ, ತಾಲೂಕು ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕಣ್ಣೆದುರೇ ನೂರಾರು ಮರಗಳನ್ನು ಕಡಿದು ಹಾಕುತ್ತಿದ್ದರೂ ಸಹ ಯಾವ ಅಧಿಕಾರಿಯೂ ಪ್ರಶ್ನಿಸದೇ ಇರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೂರಾರು ಸಸಿಗಳನ್ನು ಅರಣ್ಯ ಇಲಾಖೆಯ ವತಿಯಿಂದ ನೆಡಲಾಗಿತ್ತು. ಅವುಗಳ ಪೋಷಣೆಯನ್ನೂ ಸಹ ಮಾಡಲಾಗಿತ್ತು. ಈ ಕುರಿತು ಪರಿಶೀಲಿಸಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ ಚಿತ್ತಾಪೂರ ಉಪ ವಿಭಾಗ ಅರಣ್ಯಾಧಿಕಾರಿ ವಿಜಯ್ ಕುಮಾರ್.
ಒಂದು ಪಾಮ್ ಗಿಡ 6ರಿಂದ 7 ಸಾವಿರ ರೂ. ಬೆಲೆ ಬಾಳುತ್ತದೆ. ಜೊತೆಗೆ ಅನೇಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ, ಆರೋಗ್ಯ ವೃದ್ಧಿಸುವ ಗಿಡಗಳನ್ನು ನೆಟ್ಟಿದ್ದೆವು. ಆದರೆ ಸ್ವಲ್ಪವೂ ಕಾಳಜಿಯಿಲ್ಲದ ರೀತಿಯಲ್ಲಿ ಕಿತ್ತೆಸೆಯಲಾಗಿದೆ. ನಾವು ನೆಟ್ಟ ಗಿಡಗಳನ್ನು ನೋಡಿದರೆ ದುಃಖವಾಗುತ್ತಿದೆ. ಸ್ವಲ್ಪ ಮಾಹಿತಿ ನೀಡಿದ್ದರೂ ಸಹ ನಾವೇ ತೆಗೆದು ಬೇರೆಡೆ ನೆಡುತ್ತಿದ್ದೆವು ಎಂದು ಪರಿಸರ ಪ್ರೇಮಿ ಶ್ರೀನಿವಾಸ ಕಾಸೋಜು ಅಳಲು ತೋಡಿಕೊಂಡಿದ್ದಾರೆ.