ಕಲಬುರಗಿ: ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಅಂತಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಲಬುರಗಿಯಲ್ಲಿ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತಾಡಿದ ಸಚಿವರು, ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ. ಶಾಲಾ ಅವಧಿಯಲ್ಲಿ ಶೈಕ್ಷಣಿಕ ವಿಚಾರ ಹೊರತುಪಡಿಸಿ ಶಿಕ್ಷಕರು ಮೊಬೈಲ್ ಬಳಕೆ ಮಾಡಬಾರದು ಎಂದು ಅಧಿಕಾರಿಗಳ ಮೂಲಕ ಹೇಳುತ್ತಿದ್ದೇವೆ.
ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ನಿಷೇಧ ಬಗ್ಗೆ ಚಿಂತನೆ:ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಮೊಬೈಲ್ ಬಳಕೆಯಿಂದ, ಪಬ್ ಜೀ ಅಂತಹ ಗೇಮ್ ಗಳಿಂದ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಸಂಗ ನೋಡಿದ್ದೇವೆ. ರಾಜ್ಯದ ಹಲವು ತಾಲೂಕುಗಳಲ್ಲಿ ಪೋಷಕರು ಕೂಡ ಮಕ್ಕಳಿಗೆ ಹೋಮ್ ವರ್ಕ್ ಮಾಡಿಸುವ ವೇಳೆ ಮೊಬೈಲ್ ಬಳಕೆ ಮಾಡದಿರಲು ಪ್ರತಿಜ್ಞೆ ಮಾಡಿದ್ದಾರೆ. ಕೆಲವರು ಕೇಬಲ್ ಕಟ್ ಮಾಡಿಸಿದ್ದಾರೆ. ಮೊಬೈಲ್ ಬಳಕೆ ಮಾಡಲೇ ಬಾರದು ಅನ್ನೋದು ತಪ್ಪು. ಮೊಬೈಲ್ನಿಂದ ಸಾಕಷ್ಟು ಅನುಕೂಲ ಇದೆ. ಆದ್ರೆ ಮಕ್ಕಳಿಗೆ ಮೊಬೈಲ್ನಿಂದ ದೂರ ಇರುವ ಹಾಗೆ ನೋಡಿಕೊಳ್ಳಬೇಕು.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಅದೇ ರೀತಿ 7 ನೇ ತರಗತಿಗೂ ಹೆಚ್ಚು ಒತ್ತು ಕೊಡಲಾಗುತ್ತಿದೆ. 7 ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಅಂತ ಮಾಡಲು ತೀರ್ಮಾನ ಮಾಡಲಾಗುತ್ತಿದೆ. ಆದ್ರೆ ಯಾರನ್ನು ಫೇಲ್ ಮಾಡುವುದಿಲ್ಲ ಅಂತಾ ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತಿ ತಿಂಗಳ ಎರಡು ಶನಿವಾರ ಬ್ಯಾಗ್ ಲೇಸ್ ಡೇ ಮಾಡಲು ಚಿಂತನೆ ನಡೆದಿದೆ. ಬ್ಯಾಗ್ ಲೇಸ್ ಡೇ ದಿನ ಶಾಲೆಯಲ್ಲಿ ಪಾಠ ಇರುವುದಿಲ್ಲ. ಬದಲಾಗಿ ಆಟದ ಜೊತೆಗೆ ಇತರೆ ಚಟುವಟಿಕೆಗಳು ಇರುತ್ತವೆ ಎಂದು ಹೇಳಿದರು.