ಕಲಬುರಗಿಯಲ್ಲಿ ಕಂಪಿಸಿದ ಭೂಮಿ ಕಲಬುರಗಿ:ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಕೋಡ್ಲಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಅನುಭವವಾಗಿದೆ. ಭಾರಿ ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಪದೇ ಪದೆ ಭೂಮಿಯಂದ ಈ ರೀತಿ ಸದ್ದು ಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭಯ ಶುರುವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವಂತೆ ಸ್ಥಳೀಯರೊಬ್ಬರು ಮನವಿ ಮಾಡಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಭೂಕಂಪ ಸಂಭವಿಸಿದ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಮತ್ತು ಭೂ ವಿಜ್ಞಾನಿಗಳು ಪರೀಶಿಲನೆ ನಡೆಸಿದ್ದಾರೆ. ನಾಳೆ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು ಇದರ ಹಿನ್ನೆಲೆ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಟ್ಟಿದ್ದಾರೆ. ಬುಧವಾರ ಬೆಳಗ್ಗೆ 9.48 ರ ಸಮಯದಲ್ಲಿ 5 ಸೆಕೆಂಡ್ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಕಂಪನದಿಂದ ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಭೂಮಿ ನಡುಗಲು ಆರಂಬಿಸಿದಾಗ ಜನ ಬೆಚ್ಚಿಬಿದ್ದು ಮನೆಯಿಂದ ಹೊರಗೆ ಬಂದಿದ್ದಾರೆ. ಕೆಲ ಮನೆಗಳು ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ತಮಗಾದ ಅನುಭವ ಹೊಂಚಿಕೊಂಡಿದ್ದಾರೆ.
ಒಳ ನಡುಕು: ಚಿಂಚೋಳಿ ತಾಲೂಕಿನಲ್ಲಿ ಇದಕ್ಕೂ ಮುನ್ನ ಹಲವು ಬಾರಿ ಭೂಕಂಪವಾದ ಅನುಭಯ ಆಗಿತ್ತು. ಕಳೆದ ವರ್ಷದಲ್ಲಿ ನಾಲ್ಕಾರು ಬಾರಿ ಪದೇ ಪದೆ ಭೂಮಿ ಕಂಪಿಸಿತ್ತು. ಈ ರೀತಿಯ ವಿಚಿತ್ರ ಸದ್ದು ಇಲ್ಲಿ ಆಗಾಗ ಕೇಳಿ ಬರುತ್ತಲೇ ಇದೆ. ವಿಜ್ಞಾನಿಗಳು ತಪಾಸಣೆ ಕೈಗೊಂಡು ಇದರಿಂದ ಯಾವುದೇ ಹಾನಿ ಆಗಲ್ಲ ಎಂದು ಹೇಳಿದ್ದರು. ಹೀಗಾಗಿ ಒಂದಿಷ್ಟು ಒಳ ನಡುಕು ಇಟ್ಟುಕೊಂಡೆ ಅಲ್ಲಿನ ಜನ ಜೀವನ ನಡೆಸುತ್ತಿದ್ದು ಇಂದು ಮತ್ತೆ ಭೂಮಿ ಕಂಪಿಸಿದ ಅನುಭವಾಗಿದೆ. ಕಳೆದ ವರ್ಷ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿತ್ತು. ಅದಾದ ಬಳಿಕ ಭೂಕಂಪನದ ಪತ್ತೆಹಚ್ಚುವ ರಿಕ್ಟರ್ ಮಾಪನ ಕೂಡಾ ಗಡಿಕೇಶ್ವರ ಗ್ರಾಮದಲ್ಲಿ ಅಳವಡಿಸಲಾಗಿದೆ.
ಚಿಂಚೋಳಿ ತಾಲೂಕಿನಲ್ಲಿ ಪದೇ ಪದೆ ಭೂಕಂಪ ಆಗಲು ಕಾರಣ ಏನು ಅನ್ನೋದು ವಿಜ್ಞಾನಿಗಳು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಭಾಗದ ಭೂಮಿಯಲ್ಲಿ ಅತಿಯಾದ ಸುಣ್ಣದ ಕಲ್ಲು ಇರುವುದರಿಂದ ಅದು ಕರಗಿದಾಗ ಹೀಗೆ ಸದ್ದು ಮತ್ತು ಕಂಪಿಸಿದ ಅನುಭವ ಆಗುತ್ತೆ. ಇದರಿಂದ ತೀವ್ರ ತರಹದ ಹಾನಿ ಇಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಜನರಿಗೆ ಅಭಯ ನೀಡಿದ್ದರು. ಆದರೆ, ಮನೆಗಳಿಗೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕದ ಹಿನ್ನೆಲೆ ಗಡಿಕೇಶ್ವರ ಸೇರಿ ಹಲವು ಗ್ರಾಮಸ್ಥರು ಊರು ತೊರೆಯಲು ಸಿದ್ದರಾಗಿದ್ದರು. ಆಗ ಸರ್ಕಾರವೂ ಮುಂದೆ ಬಂದು ತಾತ್ಕಾಲಿಕ ತಡಗಿನ ಶೆಡ್ಡ್ ನಿರ್ಮಾಣ ಮಾಡಿದ್ದಲ್ಲದೇ ಗ್ರಾಮಸ್ಥರು ಊರು ತೊರೆಯದಂತೆ ನೋಡಿಕೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಆಗಮನ:ಇದೀಗ ಚಿಂಚೋಳಿ ಪಕ್ಕದ ಸೇಡಂ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಇದೇ ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಹತ್ತಿರ ವಿಶಾಲವಾದ ಪ್ರದೇಶಲ್ಲಿ ನಾಳೆ (ಜ.19) ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಭದ್ರತೆ ಹಿನ್ನೆಲೆ ವಿಜ್ಞಾನಿ, ಅಧಿಕಾರಿಗಳ ತಂಡ ಭೂಕಂಪಿಸಿದ ಗ್ರಾಮಗಳಿಗೆ ಭೇಟಿ ನೀಡಿ ಪರೀಶಿಲನೆ ಮಾಡುತ್ತಿದೆ. ಸದ್ಯ ಅಧಿಕಾರಿಗಳ ದಂಡು ಸ್ಥಳದಲ್ಲೇ ಬೀಡುಬಿಟ್ಟಿದೆ.
ಭೀತಿಯಲ್ಲಿ ಗ್ರಾಮಸ್ಥರು: ಬೆಳಗಿನ ಜಾವ 9:45ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ, ಇದು ಭೂಕಂಪಯೋ ಅಥವಾ ಸಮೀಪದಲ್ಲಿರುವ ಸಿಮೆಂಟ್ ಕಂಪನಿಯಲ್ಲಿನ ಭಾರಿ ಪ್ರಮಾಣದ ಸದ್ದಿನಿಂದ ಈ ವಾತಾರಣ ನಿರ್ಮಾಣವಾಗಿದೆಯೋ ಗೊತ್ತಿಲ್ಲ. ಆದರೆ, ಈ ಘಟನೆಯಿಂದ ಗ್ರಾಮದ ಜನ ಭಯಭೀತರಾಗಿದ್ದಾರೆ. ಸ್ಥಳಕ್ಕೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಉನ್ನತ ಅಧಿಕಾರಿಗಳಾಗಲಿ ಬಂದು ಪರಿಶೀಲನೆ ಮಾಡಬೇಕು. ಗ್ರಾಮದ ಜನರಿಗೆ ಧೈರ್ಯ ಹೇಳುವಂತಹ ಮಾತುಗಳನ್ನು ಆಡಬೇಕು. ನಾಳೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ಹಾಗಾಗಿ ಗ್ರಾಮದ ಜನರಿಗೆ ಮುನ್ಸೂಚನೆ ನೀಡಬೇಕು. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡುವಂತೆ ಸ್ಥಳೀಯ ಮಂಜುನಾಥ್ ಎನ್ನುವವರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ತಮಿಳುನಾಡು ಅರಣ್ಯದ ಆನೆಗಳಿಂದ ನಿತ್ಯ ಕಂಟಕ: ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರು ಹೈರಾಣ