ಕಲಬುರಗಿ: ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ 9.55ರ ಸುಮಾರಿಗೆ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಕಳೆದೊಂದು ವಾರದಿಂದ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಒಳಗೊಂಡಂತೆ ಕೆಲವಡೆ ಭೂಕಂಪನದ ಅನುಭವವಾಗುತ್ತಿದೆ. ಸೋಮವಾರ ರಾತ್ರಿ 9-55ರ ವೇಳೆಗೆ ಏಕಕಾಲಕ್ಕೆ ಚಿಂಚೋಳಿ, ಕಾಳಗಿ, ಸೇಡಂ ಮೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಸುಲೇಪೇಟ್, ಯಾಕಾಪುರ, ಕುಪನೂರ, ಚಿಮ್ಮನಚೋಡ, ನಿಡಗುಂದ, ಮುಕರಂಬಾ, ಇರ್ಗಾಪಲ್ಲಿ, ಗಡಿಕೇಶ್ವರ ಚಿಮ್ಮಇದಲಾಯಿ, ಕೂಡ್ಲಿ, ಬಿಬ್ಬಳ್ಳಿ, ರುದನೂರು, ಚಿಂತಪಳ್ಳಿ, ಹೊಸಳ್ಳಿ, ಪಸ್ತಾಪುರ, ಕೋಟಗಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಂಪನವಾಗಿದೆ.
ಕಲಬುರಗಿಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ ಭೂಮಿ ಅಲುಗಾಡಿದ ಅನುಭವವಾಗಿದ್ದು, ಮನೆಯಲ್ಲಿನ ಪಾತ್ರೆ, ವಸ್ತುಗಳು ನೆಲಕ್ಕುರುಳಿವೆ. ಭಯಭೀತರಾಗಿ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಗಡಿಕೇಶ್ವರ ಗ್ರಾಮದಲ್ಲಿ ಮನೆಯೊಂದರ ಗೋಡೆ ನೆಲಕ್ಕುರುಳಿದೆ. ರಿಕ್ಟರ್ ಮಾಪನದಲ್ಲಿ 4.1ರ ತೀವ್ರತೆ ದಾಖಲಾಗಿದೆ. ಆತಂಕದಲ್ಲಿರುವ ಮೂರು ತಾಲೂಕಿನ ಜನರು ತಡರಾತ್ರಿಯಾದರೂ ನಿದ್ರೆ ಮಾಡದೆ ಜಾಗರಣೆ ಮಾಡುತ್ತಿದ್ದಾರೆ. ದೇವಸ್ಥಾನ, ಶಾಲಾ ಆವರಣ, ಹೊಲಗಳಲ್ಲಿ ಮಲಗಲು ತೆರಳುತ್ತಿದ್ದಾರೆ.
ಬೆಂಗಳೂರಿನಲ್ಲಿರುವ ಸಂಸದ ಡಾ. ಉಮೇಶ ಜಾಧವ ಅಲ್ಲಿಂದಲೇ ಜನರಿಗೆ ಆತಂಕ ಪಡದಂತೆ ಸಂದೇಶ ರವಾನಿಸಿದ್ದಾರೆ. ವಿಜ್ಞಾನಿಗಳು, ಅಧಿಕಾರಿಗಳ ತಂಡವು ಭೂಕಂಪನವಾದ ಸ್ಥಳಗಳಿಗೆ ಭೇಟಿ ನೀಡಲಿದೆ. ಕಂಪನಕ್ಕೆ ಕಾರಣ ಏನು ಅನ್ನೋದು ಪತ್ತೆ ಹಚ್ಚಲಿದ್ದಾರೆ, ಯಾರೂ ಆತಂಕ ಪಡಬೇಡಿ. ಎಚ್ಚರದಿಂದ ಇರಿ ಎಂದು ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಕುಗ್ಗುತ್ತಿದೆಯಾ ವರುಣ್ ಗಾಂಧಿ ವರ್ಚಸ್ಸು.. ಮುಂದೇನು?