ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮತ್ತೆ ಭೂಮಿಯಿಂದ ಭಾರಿ ಶಬ್ದ ಹಾಗೂ ಲಘು ಭೂಕಂಪನ ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಿಂದ ಮನೆಯಿಂದ ಹೊರಗೆ ಬಂದು ನಿಂತಿದ್ದಾರೆ.
ಇಂದು ಸಂಜೆ 5 ಗಂಟೆಗೆ ಮತ್ತು 5.20 ನಿಮಿಷಕ್ಕೆ ಎರಡು ಬಾರಿ ಭೂಮಿಯಿಂದ ಭಾರೀ ಶಬ್ದ ಕೇಳಿಸಿದೆ. ಈ ವೇಳೆ ಗ್ರಾಮಸ್ಥರಿಗೆ ಲಘು ಭೂಕಂಪನದ ಅನುಭವವಾಗಿದೆ. ಗಾಬರಿಯಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತಿವರ್ಷ ಮಳೆಗಾಲದಲ್ಲಿ ಇಂತಹ ವಿಚಿತ್ರ ಸದ್ದು ಹಾಗೂ ಭೂಕಂಪನದ ಅನುಭವ ಆಗುತ್ತಿದೆ.
ಸೆ. 1 ರಂದು ಇದೇ ರೀತಿಯ ಅನುಭವವಾಗಿತ್ತು. ಮನೆಯಿಂದ ಹೊರಗೆ ಬಂದ ಜನರು ರಾತ್ರಿ ಇಡೀ ದೇವಸ್ಥಾನಗಳಲ್ಲಿ ಭಜನೆ ಮಾಡಿ ರಾತ್ರಿ ಕಳೆದಿದ್ದರು. ಪದೇ ಪದೆ ಇಂತಹ ಘಟನೆ ನಡೆಯುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ಮಳೆಗಾಲದಲ್ಲಿ ಇದೇ ರೀತಿ ಘಟನೆ ನಡೆದಾಗ ಗ್ರಾಮಕ್ಕೆ ಭೇಟಿ ನೀಡಿದ ವಿಜ್ಞಾನಿಗಳು ಭೂಮಿಯೊಳಗಿನ ರಾಸಾಯನಿಕ ಪಕ್ರಿಯೆಯಿಂದ ಇಂತಹ ಸದ್ದು ಬರುತ್ತಿದೆ. ಜನರು ಆತಂಕ ಪಡಬಾರದು ಅಂತ ಹೇಳಿದ್ದರು.
ಗ್ರಾಮದಲ್ಲಿ ತಾತ್ಕಾಲಿಕ ತಗಡಿನ ಶೆಡ್ಗಳನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ಇದೀಗ ಮತ್ತೆ ಗ್ರಾಮದ ಜನರಿಗೆ ಸದ್ದು ಕೇಳಿಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ:ಚಾಮರಾಜನಗರ: ಭೂಕಂಪದ ಅನುಭವ, ಮನೆ ಬಿಟ್ಟು ಹೊರಬಂದ ಜನರು