ಕಲಬುರಗಿ:ಜಾಗೃತನಾಗಿ ಬೈಕ್ ಓಡಿಸಬೇಕಾದ ಯುವಕನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಸೆಣಸಾಟ ನಡೆಸುವಂತಾಗಿದೆ. ಯುವಕನ ಈ ಹುಚ್ಚುತನದ ಡ್ರೈವಿಂಗ್ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದ್ದು ಸಕತ್ ವೈರಲ್ ಆಗ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಅಡ್ಡಾದಿಡ್ಡಿಯಾಗಿ ಬೈಕ್ ಡ್ರೈವಿಂಗ್: ವಿಡಿಯೋ ಸಖತ್ ವೈರಲ್ ರಸ್ತೆಯಲ್ಲಿ ಬೈಕ್ ಅಡ್ಡಾದಿಡ್ಡಿಯಾಗಿ ಓಡಿಸಿ ಎದುರಿಗೆ ಬರುವ ಬೊಲೆರೋ ಜಿಪ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾನೆ. ಜೇವರ್ಗಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಹರವಾಳ ಗ್ರಾಮದ ಬಳಿ ಈ ಘಟನೆ ನಡೆದಿದೆ. ಯುವಕನ ಈ ಹುಚ್ಚು ಸಾಹಸ ಬೈಕ್ ಹಿಂದೆ ಬರುತ್ತಿದ್ದ ಮತ್ತೊಂದು ವಾಹನದಲ್ಲಿದ್ದವರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ.
ಬೈಕ್ ಚಲಾಯಿಸುತ್ತಾ ಎದುರಿಗೆ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯಲು ಯತ್ನಿಸಿ ಕಟ್ ಹೊಡೆದು ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಹಲವು ಬಾರಿ ಪಾರಾಗಿದ್ದಾನೆ. ಕೊನೆಗೆ ಎದುರಿಗೆ ಬಂದ ಜೀಪ್ಗೆ ಡಿಕ್ಕಿ ಹೊಡೆದ ಬೈಕ್ ಸವಾರ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಸೆಣಸಾಟ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.
ಆಗಸ್ಟ್ 14 ರಂದು ಈ ಘಟನೆ ನಡೆದಿದ್ದು, ಈ ಹುಚ್ಚು ಸಾಹಸ ಮಾಡಿದವನು ಜೇವಗಿ೯ ತಾಲೂಕಿನ ಮಾಹೂರ ಗ್ರಾಮದ ಮರೆಪ್ಪ ಅಣದಿ (28) ಎಂದು ತಿಳಿದುಬಂದಿದೆ. ಸದ್ಯ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.