ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷರಾಗಿ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ನೇಮಕಗೊಂಡಿದ್ದು, ಸೋಮವಾರ ನಗರದ ಐವಾನ-ಎ-ಶಾಹಿ ಪ್ರದೇಶದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಅಜಯ್ ಸಿಂಗ್, ಮ್ಯಾಕ್ರೋ ಯೋಜನೆಗಳನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಈ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಅಂಟಿಕೊಂಡಿರುವ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸುವುದೇ ನಮ್ಮ ಮೊದಲ ಗುರಿ. ಈ ಪ್ರದೇಶದಲ್ಲಿನ ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು, ಅಪೌಷ್ಟಿಕತೆ ನಿವಾರಣೆ, ತಾಯಿ-ಮಕ್ಕಳ ಮರಣ ಪ್ರಮಾಣ ತಗ್ಗಿಸುವುದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು, ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.
ರಾಜ್ಯದ ಈ ಹಿಂದಿನ 175 ತಾಲೂಕುಗಳಲ್ಲಿ 114 ತಾಲೂಕು ಹಿಂದುಳಿದ ತಾಲೂಕುಗಳಾಗಿವೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 39 ತಾಲೂಕು ಸೇರಿವೆ ಎಂದು ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಪ್ರತಿ ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಸಾಕ್ಷರತೆ ಪ್ರಮಾಣ ಶೇ.75.36 ಇದ್ದರೆ, ಕ.ಕ. ಭಾಗದ ಪ್ರಮಾಣ ಸಾಕ್ಷರತೆ ಶೇ.64ರಷ್ಟು ಇದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಪ್ರತಿ ಹೋಬಳಿವಾರು ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸರ್ಕಾರ ನೀಡುವ ಅನುದಾನವನ್ನು ಖರ್ಚು ಮಾಡಿಲ್ಲ ಎಂಬ ಆಪಾದನೆ ಇದೆ. ಇದನ್ನು ತಮ್ಮ ಅವಧಿಯಲ್ಲಿ ಮುಂದುವರೆಯಲು ಬಿಡುವುದಿಲ್ಲ. ಮಂಡಳಿಗೆ ಅಧಿಕಾರಿ-ಸಿಬ್ಬಂದಿ, ಇಂಜಿನಿಯರ್ ಕೊರತೆ ಇರುವುದು ಗಮನಕ್ಕೆ ಬಂದಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆದು ಸಿಬ್ಬಂದಿ ಭರ್ತಿ ಮಾಡಲಾಗುವುದು. ಮುಂದೆ ಅನುದಾನವನ್ನು ಸಹ ಕಾಲಮಿತಿಯಲ್ಲಿ ಖರ್ಚು ಮಾಡಲಾಗುವುದು ಎಂದು ಹೇಳಿದರು.