ಕಲಬುರಗಿ: ಗಂಡ ಹಾಗೂ ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ನವವಿವಾಹಿತೆ ಬಲಿಯಾಗಿರುವ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ.
ರುಬಿನಾ ಬೇಗಂ (22) ಮೃತ ದುರ್ದೈವಿ. ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ರುಬಿನಾ ಬೇಗಂಳನ್ನು ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಮದರಿ ಗ್ರಾಮದ ಯಾಕೂಬ್ ಶಾಹಾ ಎಂಬಾತನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು.
ಆದ್ರೆ ಮದುವೆಯಾದಾಗಿನಿಂದಲೂ ಪತಿ ಮತ್ತು ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಗ್ಯಾರೇಜ್ ಪ್ರಾರಂಭಿಸಲು ತವರಿನಿಂದ ಎರಡು ಲಕ್ಷ ರೂಪಾಯಿ ತರುವಂತೆ ಪೀಡಿಸುತ್ತಿದ್ದರು. ಹಣ ತರಲು ನಿರಾಕರಿಸಿದಕ್ಕೆ ದೈಹಿಕ ಹಿಂಸೆ ನೀಡಿ, ನೇಣು ಹಾಕಿ ಕೊಲೆ ಮಾಡಲಾಗಿದೆ ಎಂದು ರುಬಿನಾ ಬೇಗಂ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.