ಕಲಬುರಗಿ: ಒಂದಕ್ಕಿಂತ ಒಂದು ಮುದ್ದು ಮುದ್ದಾದ ನಾಯಿ ಮರಿಗಳು. ಅವುಗಳನ್ನು ಎತ್ತಿ ಮುದ್ದಾಡುತ್ತಿರುವ ಶ್ವಾನ ಪ್ರಿಯರು. ಭಾನುವಾರ ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮದಲ್ಲಿ ಕಂಡು ಬಂದ ದೃಶ್ಯವಿದು. ಈ ಬಗೆಬಗೆಯ ಶ್ವಾನಗಳನ್ನು ನೋಡಲು ಜಿಲ್ಲೆಯ ಸಾವಿರಾರು ಜನ ಆಗಮಿಸಿದ್ದರು. ಕಲಬುರಗಿ ಜನರಿಗೆ ಶ್ವಾನ ಪ್ರದರ್ಶನ ಮುದ ನೀಡಿತು. ಕಲ್ಯಾಣ ಕರ್ನಾಟಕ ಉತ್ಸವ ಅಂವಾಗಿ ಭಾನುವಾರ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಕಳೆದ ಶುಕ್ರವಾರದಿಂದ ಭಾನುವಾರ ಮಧ್ಯರಾತ್ರಿವರೆಗೆ ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಕಳೆಗಟ್ಟಿತ್ತು. ಉತ್ಸವದಲ್ಲಿ ಆಯೋಜನೆ ಮಾಡಲಾಗಿದ್ದ ವಿವಿಧ ಸ್ಪರ್ಧೆಗಳು ಹಾಗೂ ಪ್ರದರ್ಶನಗಳು ಜನರ ಗಮನ ಸೆಳೆದವು. ಅದರಂತೆ ಗುಲ್ಬರ್ಗ ವಿಶ್ವವಿದ್ಯಾಲಯದ ಇಂಡೋರ್ ಸ್ಟೇಡಿಯಂನಲ್ಲಿ ಅಪರೂಪದ 'ಡಾಗ್ ಶೋ' ಆಯೋಜನೆ ಮಾಡಲಾಗಿತ್ತು. ಜಿಲ್ಲಾ ಪಂಚಾಯತ್, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶ್ವಾನ ಪ್ರದರ್ಶನವು ಪ್ರಾಣಿ ಪ್ರಿಯರನ್ನು ಆಕರ್ಷಿಸಿತು.
ಗಮನ ಸೆಳೆದ ವಿವಿಧ ತಳಿಯ ನಾಯಿಗಳು:ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ನಡೆದ ಡಾಗ್ ಶೋನಲ್ಲಿ ಕರ್ನಾಟಕದ ಮುಧೋಳ ತಳಿ ಸೇರಿ ಲ್ಯಾಬ್ರಿಡೋ, ಬಿಗಲ್ ತಳಿ, ಗೋಲ್ಡನ್ ರಿಟ್ರಾವೇರ್ ತಳಿ, ಚೀನಾ ದೇಶದ ಚೌಚೌ ತಳಿ, ಡೀಗಲ್ ಫಿಟ್ ಬುಲ್, ಜರ್ಮನ್ ಶಫರ್ಡ್ ಸೇರಿದಂತೆ ದೇಶಿ-ವಿದೇಶಿ ತಳಿಯ 28 ಕ್ಕೂ ಹೆಚ್ಚು ಜಾತಿಯ 150ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.