ಕರ್ನಾಟಕ

karnataka

ETV Bharat / state

ಸಣ್ಣೂರು ತಾಂಡಾ‌ದಲ್ಲಿ ಸಂಭ್ರಮದ ದೀಪಾವಳಿ ಆಚರಣೆ - ಕಲಬುರಗಿಯ ಸಣ್ಣೂರು ತಾಂಡಾ

ಕಲಬುರಗಿ ಜಿಲ್ಲೆಯ ಸಣ್ಣೂರು ತಾಂಡಾ‌ದಲ್ಲಿ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು, ಕೈಯಲ್ಲಿ ದೀಪ ಹಿಡಿದು ಮನೆ ಮನೆಗೆ ತೆರಳಿ, ನೃತ್ಯ ಮಾಡಿ ದೀಪಾವಳಿ ಹಬ್ಬವನ್ನ ಸಂಭ್ರಮಿಸಿದರು.

diwali
ಸಣ್ಣೂರು ತಾಂಡಾ‌ದಲ್ಲಿ ಸಂಭ್ರಮದಿಂದ ದೀಪಾವಳಿ ಆಚರಣೆ

By

Published : Oct 27, 2022, 8:45 AM IST

Updated : Oct 27, 2022, 12:15 PM IST

ಕಲಬುರಗಿ: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಕಳೆಗಟ್ಟಿದೆ. ಬಂಜಾರ ಜನಾಂಗದ ದೀಪಾವಳಿ ಹಬ್ಬ 'ಮೇರಾ' ಸಂಭ್ರಮವಂತೂ ಕಣ್ಮನ ಸೆಳೆಯುತ್ತಿದೆ. ಕಲಬುರಗಿಯ ಬಂಜಾರ ಜನಾಂಗವು ಅನಾದಿ ಕಾಲದಿಂದಲೂ ತಮ್ಮದೇ ಆದ ವಿಶಿಷ್ಟ ಮತ್ತು ವಿನೂತನ ರೀತಿಯಲ್ಲಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದು, ನೋಡುಗರಲ್ಲಿ ಖುಷಿ ಮೂಡಿಸುತ್ತದೆ.

ಹೌದು, ಕಳೆದ ಎರಡು ವರ್ಷ ಕೋವಿಡ್ ಕಾರಣಕ್ಕೆ ಸೋರಗಿದ್ದ ದೀಪಾವಳಿ ಹಬ್ಬದ ಸಂಭ್ರಮ ಈ ವರ್ಷ ಕಳೆಗಟ್ಟಿದೆ. ಅದರಲ್ಲೂ ಬಂಜಾರ ಜನಾಂಗಕ್ಕೆ ದೀಪಾವಳಿ ಹಬ್ಬ ಬಹಳ ವಿಶೇಷ. ತಾಂಡಾಗಳಲ್ಲಿ ದೀಪಾವಳಿಯ 'ಮೇರಾ' ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬ. ತಾಂಡಾಗಳಲ್ಲಿ ಅಮಾವಾಸ್ಯೆ ದಿನದಿಂದ ದೀಪಾವಳಿ ಆಚರಣೆ ಪ್ರಾರಂಭವಾಗುತ್ತದೆ.

ಸಣ್ಣೂರು ತಾಂಡಾ‌ದಲ್ಲಿ ಸಂಭ್ರಮದಿಂದ ದೀಪಾವಳಿ ಆಚರಣೆ

ತಾಂಡಾದ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು ಸೇವಾಲಾಲ ಮರಿಯಮ್ಮ ದೇವಿಯ ಮಂದಿರಕ್ಕೆ ಆಗಮಿಸಿ, ದೇವರಿಗೆ ದೀಪ ಬೆಳಗಿಸಿದರು. ನಂತರ ಸಾಮೂಹಿಕವಾಗಿ ಸಾಂಪ್ರದಾಯಿಕ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

ಜೀವನದಲ್ಲಿ ಎದುರಾದ ದುಃಖ ದುಮ್ಮಾನಗಳು ಕಳೆದು ಕತ್ತಲೆಯಿಂದ ಬೆಳಕಿನಡೆಗೆ ಜೀವನ ಸಾಗಲಿ ಎನ್ನುವುದೇ ಮೇರಾ ಹಬ್ಬದ ಅರ್ಥ. ಬಂಜಾರ ಜನಾಂಗ ಇದನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದೆ. ಕಲಬುರಗಿಯ ಸಣ್ಣೂರು ತಾಂಡಾ ಹಾಗೂ ಜಿಲ್ಲೆಯ ಇತರ ತಾಂಡಾಗಳಲ್ಲಿ ಚಾಚು ತಪ್ಪದೇ ಅನಾದಿ ಕಾಲದ ಮಾದರಿಯಲ್ಲೇ ಆಚರಣೆಗಳನ್ನ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ:ಲಂಬಾಣಿ ಸಮುದಾಯದವರೊಂದಿಗೆ ದೀಪಾವಳಿ ಆಚರಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ

ದೀಪಾವಳಿ ಅಮಾವಾಸ್ಯೆ ದಿನ ಕಾಳಿಮಾಸ್ ದಿನ ಎಂದು ರಾತ್ರಿಯಿಂದ ಬೆಳಗಿನವರೆಗೆ ತಾಂಡಾದ ಮದುವೆಯಾಗದ ಕನ್ಯಾಮಣಿಯರು ಹೊಸ ಸಾಂಪ್ರದಾಯಿಕ ಉಡುಪು ತೊಟ್ಟು, ಕೈಯಲ್ಲಿ ಹಣತೆ ಹಿಡಿದು ತಾಂಡಾದ ಮನೆಗಳಿಗೆ ತೆರಳಿ ದೀಪ ಬೆಳಗಿಸುವುದು ರೂಢಿಯಲ್ಲಿದೆ. ಮದುವೆ ನಿಶ್ಚಯವಾದ ಯುವತಿಯರು ಅರಣಿಯಲ್ಲಿ ಹುಲ್ಲಿನಿಂದ ತಯಾರಿಸಿದ ಹಣತೆಯನ್ನು ಇಟ್ಟುಕೊಂಡು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಆಕಳು, ಎತ್ತುಗಳಿಗೆ ಆರತಿ ಬೆಳಗಿಸಿ, ಮನೆಯವರಿಗೆ ಅಕ್ಕಿ ಹಿಟ್ಟು, ಬೆಲ್ಲ ಹಾಗೂ ನೀರು ಅರ್ಪಿಸುತ್ತಾರೆ.

ಸಣ್ಣೂರು ತಾಂಡಾ‌ದಲ್ಲಿ ಸಂಭ್ರಮದಿಂದ ದೀಪಾವಳಿ ಆಚರಣೆ

ಇದರೊಂದಿಗೆ ನಾನು ಗಂಡನ ಮನೆಗೆ ಹೋಗ್ತಿದ್ದೇನೆ. ನನಗೂ ತಾಂಡಾಕ್ಕೂ ಋಣ ತೀರಿದೆ. ನನ್ನ ಹೆತ್ತವರು ಒಡಹುಟ್ಟಿದವರನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು‌ ಸಾಂಪ್ರದಾಯಿಕ ಹಾಡಿನ ಮೂಲಕ ಹೇಳಿ ಹೋಗ್ತಾರೆ.

ಇದನ್ನೂ ಓದಿ:ದೀಪಾವಳಿ ಸಂಭ್ರಮ: ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ

ಜೊತೆಗೆ ದೀಪಾವಳಿ ಆರಂಭದಿಂದ ಮುಗಿಯುವ ವರೆಗೆ ಬಂಜಾರ ಸಮುದಾಯದವರು ಮನೆಯಿಂದ ದನಕರುಗಳ ಸಗಣಿಯನ್ನ ಹೊರಗೆ ಚೆಲ್ಲುವುದಿಲ್ಲ. ಇದರಲ್ಲಿ ಲಕ್ಷ್ಮಿ ಇರ್ತಾಳೆ ಎಂಬ ನಂಬಿಕೆ ಅವರಲ್ಲಿರುತ್ತೆ. ಒಟ್ಟಾರೆ, ಬಂಜಾರ ಜನಾಂಗಕ್ಕೆ ದೀಪಾವಳಿ ಅತಿದೊಡ್ಡ ಹಬ್ಬವಾಗಿದ್ದು, ಹತ್ತು ಹಲವು ವಿಶಿಷ್ಟತೆಯೊಂದಿಗೆ ಹಬ್ಬ ಮುಂದುವರೆಸಿಕೊಂಡು ಬರುತ್ತಿದ್ದಾರೆ.

Last Updated : Oct 27, 2022, 12:15 PM IST

ABOUT THE AUTHOR

...view details