ಕಲಬುರಗಿ:ದೇಶದಲ್ಲಿ ಒಡೆದಾಳುವ ನೀತಿ ಅನುಸರಿಸಲಾಗುತ್ತಿದೆ. ಹೀಗೆ ಮುಂದುವರೆದರೆ ಮುಂದೊಂದು ದಿನ ದೇಶಕ್ಕೆ ದೊಡ್ಡದೊಂದು ಕುತ್ತು ಬರಲಿದೆ ಎಂದು ಹೆಸರು ಬಳಸದೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಾಹಿತಿಗಳು ಬರವಣಿಗೆ ಮೂಲಕ ಒಡೆದಾಳುವ ನೀತಿ ತಡೆಯಬೇಕು: ಮಲ್ಲಿಕಾರ್ಜುನ ಖರ್ಗೆ - 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ದೇಶದಲ್ಲಿ ಒಡೆದಾಳುವ ನೀತಿ ಅನುಸರಿಸಲಾಗುತ್ತಿದೆ. ಸಾಹಿತಿಗಳು, ಬರಹಗಾರರು ಹೆಚ್ಚಿನ ಕಳಕಳಿ ವಹಿಸಿ ತಮ್ಮ ಬರವಣಿಗೆ ಮೂಲಕ ಒಡೆದಾಳುವ ನೀತಿ ತಡೆಗಟ್ಟಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಕುತ್ತು ತರುವ ಕೆಲಸ ದೇಶದಲ್ಲಿ ನಡೆದಿದೆ. ಅಂಬೇಡ್ಕರ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್‌ರಂತ ಮಹಾನ್ ನಾಯಕರು ಕಟ್ಟಿದ ದೇಶವನ್ನು ಕೆಲವರು ಈಗ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಾಹಿತಿಗಳು, ಬರಹಗಾರರು ಹೆಚ್ಚಿನ ಕಳಕಳಿ ವಹಿಸಿ ತಮ್ಮ ಬರವಣಿಗೆ ಮೂಲಕ ಒಡೆದಾಳುವ ನೀತಿ ತಡೆಗಟ್ಟಬೇಕು. ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಸಾಹಿತಿಗಳು ಮಾಡಬೇಕೆಂದರು.
ಇದೇ ವೇಳೆ ಡಾ.ತೇಜಸ್ವಿನಿ ಅನಂತ್ ಕುಮಾರ್, ಚಿತ್ರನಟಿ ಅಭಿನಯ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಎಸ್.ಕೆ.ಕಾಂತಾ, ಪತ್ರಕರ್ತ ರವಿ ಹೆಗಡೆ, ಚನ್ನವೀರ ಶಿವಾಚಾರ್ಯರು, ಪದ್ಮಾ ಶಾಸ್ತ್ರಿ, ವಿಠ್ಠಲ ದೊಡ್ಡಮನಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಜನ ಸಾಧಕರಿಗೆ ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶ ಮೂರ್ತಿ, ಶಾಸಕ ಅಜಯಸಿಂಗ್ ಸೇರಿದಂತೆ ಇತರೆ ನಾಯಕರು ಹಾಜರಿದ್ದರು.