ಕಲಬುರಗಿ:ಮಾಜಿ ಸಂಸದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಡಳಿತಾವಧಿಯಲ್ಲಿ ಕೇಂದ್ರದ ಅನುದಾನಗಳನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆಂಬ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಮುರುಳಿಧರ ರಾವ್ ಹೇಳಿಕೆ ವಿರುದ್ಧ ಕಲಬುರಗಿ ಜಿಲ್ಲಾ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಿನ್ನೆ ಕಲಬುರಗಿ ಪ್ರವಾಸದಲ್ಲಿದ್ದ ಮುರುಳಿಧರ ರಾವ್ ಏಕತಾ ಸಮಾರಂಭದಲ್ಲಿ ಖರ್ಗೆ ವಿರುದ್ಧ ವಾಗ್ದಾಳಿ ನಡಸಿದ್ದು, ಇಂದು ಮುರುಳಿಧರ್ ರಾವ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೆದಾರ ಹಾಗೂ ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಜಂಟಿ ಪತ್ರಿಕಾಗೊಷ್ಠಿ ನಡೆಸಿ ತೀವ್ರ ವಾಗ್ದಾಳಿ ನಡೆಸಿದರು.
ಮುರುಳಿಧರ ರಾವ್ ಹೇಳಿಕೆ ವಿರುದ್ಧ ಕಲಬುರಗಿ ಜಿಲ್ಲಾ ಕಾಂಗ್ರೆಸ್ ವಾಗ್ಧಾಳಿ ಈ ವೇಳೆ ಮಾತನಾಡಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ತಮ್ಮ 50 ವರ್ಷ ರಾಜಕೀಯ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಿದ್ದಾರೆ. ಆದರೆ, ಬಿಜೆಪಿಯ ಅವಿವೇಕಿ ಮುಖಂಡ ಮುರುಳಿಧರ ರಾವ್ ರಾಜಕೀಯ ಜ್ಞಾನವಿಲ್ಲದೆ ಖರ್ಗೆ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದು ಖಂಡನಿಯ, ಸ್ವತಃ ತಾನೇ ಫ್ರಾಡ್ ಆಗಿರುವ ಮುರುಳಿಧರ ರಾವ್ ಮತ್ತೊಬ್ಬರ ಮೇಲೆ ನಿರಾಧಾರ ಆರೋಪ ಮಾಡುವದು ಸರಿಯಲ್ಲ, ಮೊದಲು ಹೈದ್ರಾಬಾದ್ನಲ್ಲಿ ತನ್ನ ಮೇಲಿರುವ 420 ಪ್ರಕರಣ ಸರಿಪಡಿಸಿಕೊಳ್ಳಲಿಯೆಂದು ಅಸಮಧಾನ ಹೊರಹಾಕಿದರು.
ಇನ್ನು ಪ್ರವಾಹ ಪೀಡಿತರ ಮೇಲೆ ಕಾಳಜಿ ಇದ್ದರೆ ದತ್ತು ತೆಗೆದುಕೊಂಡು ಮನೆ ಕಟ್ಟಿಸಿಕೊಡಲಿ ಎಂಬ ಸಚಿವ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ್, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ನಮ್ಮ ಕೈಲಾಗಲ್ಲವೆಂದು ಒಪ್ಪಿಕೊಳ್ಳಲಿ, ನಂತರ ನಾವು ನೆರೆ ಪ್ರದೇಶಗಳನ್ನು ದತ್ತು ಪಡೆದು ಅಗತ್ಯ ಸೌಕರ್ಯ ಕಲ್ಪಿಸಿಕೊಡುತ್ತೇವೆಂದು ತಿರುಗೇಟು ನೀಡಿದರು.