ಕಲಬುರ್ಗಿ :ವಿಶ್ವದಲ್ಲೆಡೆ ತನ್ನ ಕಬಂಧ ಬಾಹು ಚಾಚುತ್ತಿರುವ ಹೆಮ್ಮಾರಿ ಕೊರೊನಾ ಜಿಲ್ಲೆಯ ರೈತರನ್ನು ಕಂಗಾಲಾಗಿಸಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಅನ್ನದಾತರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
'ನಾವ್ ರೈತರು ಸಾಯ್ಬೇಕೋ ಇಲ್ಲ ಇರ್ಬೇಕೋ ಹೇಳ್ಬಿಡ್ರೀ..' ಕಲ್ಲಂಗಡಿ ಬೆಳೆದ ರೈತನ ಕಿಡಿ! - ಕೊರಾನಾ ವೈರಸ್
ಕಲ್ಲಂಗಡಿ ಖರೀದಿಸಲು ಜನರು ಮುಂದೆ ಬರುತ್ತಿಲ್ಲ. ಸಮೃದ್ಧ ಬೆಳೆ ಬೆಳೆದರೂ ಬೆಲೆ ಇಲ್ಲದೆ ಕಲಬುರ್ಗಿ ಜಿಲ್ಲೆಯ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕಿಂತ ಈ ವರ್ಷ ಉತ್ತಮ ಮಳೆಯಾಗಿ ಭೂಮಿಯಲ್ಲಿ ಅಲ್ಪಸ್ವಲ್ಪ ನೀರಿದೆ. ನೀರು ಇರುವ ಕಾರಣ ರೈತರು ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಉತ್ತಮ ಫಸಲೇನೋ ಬಂದಿದೆ. ಆದರೆ, ಕೊರೊನಾ ವೈರಸ್‍ನಿಂದ ಇತ್ತ ಬೆಲೆ ಇಲ್ಲದೇ ಅತ್ತ ಸರ್ಕಾರಿ ಸೌಲಭ್ಯವಿಲ್ಲದೆ ರೈತರು ಪರದಾಡುವ ಸ್ಥಿತಿ ಇದೆ. ಶಹಾಬಾದ ತಾಲೂಕಿನ ಮರತೂರ ಗ್ರಾಮದ ಮದನ ಕಾಂಬಳೆ ಎಂಬ ರೈತ ತಮ್ಮ 2 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಡ್ರಿಪ್, ಮಲ್ಚಿಂಗ್, ಗೊಬ್ಬರ, ಡಿಎಪಿ ಮತ್ತು ಔಷಧಿ ಸೇರಿ ಒಂದು ಲಕ್ಷಕ್ಕೂ ಅಧಿಕ ಖರ್ಚು ಮಾಡಿಕೊಂಡಿದ್ದಾರೆ. ಶ್ರಮಕ್ಕೆ ಫಲವಾಗಿ ಉತ್ತಮ ಕಲ್ಲಂಗಡಿ ಬೆಳೆದಿವೆ. ತಲಾ ಐದಾರು ಕೆಜಿ ತೂಗುವಷ್ಟು ಸಮೃದ್ಧವಾಗಿವೆ. 7 ರಿಂದ 8 ರೂ. ಕೆ.ಜಿಯಂತೆ ಬೆಲೆ ಸಿಕ್ಕರೂ ಅಂದಾಜು 3 ಲಕ್ಷ ರೂ. ಬರುತ್ತಿತ್ತು. ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದಿತ್ತು.
ಜಿಲ್ಲೆಯಲ್ಲಿ ಅಂದಾಜು 500 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಸರಿಯಾದ ಬೆಲೆ ಇಲ್ಲದೆ ಈಗ ಜಮೀನಿಗೆ ಬರುವ ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪರಿಹಾರ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.