ಕಲಬುರಗಿ :ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ಡೆತ್ ಮೆಸೇಜ್ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಿರುವುದರಿಂದ ಅವರನ್ನ ವಜಾ ಮಾಡಬೇಕು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಗುತ್ತಿಗೆದಾರರು ಈ ಮುಂಚೆ ಸರ್ಕಾರ ಶೇ.40 ಕಮಿಷನ್ ಬೇಡಿಕೆ ಇಟ್ಟಿದೆ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಆದರೂ ಕೂಡ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರತಿಯೊಂದಕ್ಕೂ ಸರ್ಕಾರ ದಾಖಲೆ ಕೇಳುತ್ತಿದೆ. ಈಗ ಒಂದು ಜೀವ ಹೋಗಿದೆ, ಇದಕ್ಕಿಂತ ಪ್ರೂಫ್ ಬೇಕಾ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ನೀಡಲಿಲ್ಲ : 40 ಪರ್ಸೆಂಟ್ ಕಮೀಷನ್ ಬಗ್ಗೆ ಈ ಹಿಂದೆ ಅನೇಕ ಬಾರಿ ಸಂತೋಷ ಹೇಳಿದ್ದರು. ಆದರೆ, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. 'ನಾ ಖಾವುಂಗಾ.. ಖಾನೇಕೋಭಿ ನಹಿ ದೇವುಂಗಾ' ಎಂದು ಪ್ರಧಾನಿ ಹೇಳಿದ್ದರು. ಆದರೆ, ಸರ್ಕಾರದಲ್ಲಿ ಎಲ್ಲವೂ ನಡೆಯುತ್ತಿದೆ. ಈ ವಿಷಯವನ್ನ ಬೆಳಗಾವಿ-ಬೆಂಗಳೂರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆವು. ಆದರೆ, ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ದುರ್ದೈವವೆಂದರೆ ಚರ್ಚೆ ಮಾಡಲು ನಿಮ್ಮ ಹತ್ತಿರ ಪ್ರೂಫ್ ಇದೆಯಾ ಅಂತಾ ಕೇಳಿದ್ದರು ಎಂದು ಹೇಳಿದರು.