ಕಲಬುರಗಿ :ವಿಜಯಪುರ ಗುಂಡಿನ ದಾಳಿ ಪ್ರಕರಣ ಎರಡೂ ಕುಟುಂಬಗಳ ನಡುವಿನ ಸಂಘರ್ಷ, ಈ ಸಂಘರ್ಷಕ್ಕೆ 20 ವರ್ಷಗಳ ಇತಿಹಾಸವಿದೆ. ಪ್ರಕರಣದ ಸಿಐಡಿ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ನಗರದಲ್ಲಿ ಮಾತನಾಡಿ, ಗುಂಡಿನ ದಾಳಿ ಮಾಡಿದವರ ಪೈಕಿ ಕೆಲವರು ಕರ್ನಾಟಕದವರಿದ್ದಾರೆ ಮತ್ತೆ ಕೆಲವರು ಹೊರಗಿನವರಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆಯಲಾಗಿದೆ, ಉಳಿದವರನ್ನು ಬಂಧಿಸಲಾಗುತ್ತೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಡ್ರಗ್ಸ್ ಜೊತೆಗೆ ಅಕ್ರಮ ಶಸ್ತ್ರಾಸ್ತ್ರದ ವಿರುದ್ಧವೂ ಅಭಿಯಾನ ಆರಂಭಿಸುತ್ತೇವೆ :
ಡ್ರಗ್ಸ್ ವಿಷಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ 'ಝೀರೋ ಟಾಲರೆನ್ಸ್ ಡ್ರಗ್ಸ್ ಅಭಿಯಾನ' ಆರಂಭಿಸಿದ್ದೇವೆ. ಮೂರು ಸಾವಿರಕ್ಕೂ ಅಧಿಕ ಕೇಸ್ಗಳನ್ನು ಈಗಾಗಲೆ ದಾಖಲಿಸಿದ್ದೇವೆ. ಡ್ರಗ್ ಪೆಡ್ಲರ್ಗಳ ಮೇಲೆ ಗೂಂಡಾ ಕಾಯ್ದೆ ಹಾಗೂ ಕೇಂದ್ರದ ಎನ್ಡಿಪಿಎಸ್-ಪಿಟಿಐ ಕಾಯ್ದೆಯಡಿಯೂ ಪ್ರಕರಣ ದಾಖಲು ಮಾಡಲಾಗುತ್ತಿದೆ. ಡ್ರಗ್ ಪ್ರಕರಣದಲ್ಲಿ ಜೈಲಿಗೆ ಹೋದ ಯಾರಿಗೂ ಬೇಲ್ ಸಿಕ್ಕಿಲ್ಲ ಎಂದರು.
ಗಾಂಜಾ, ಟ್ಯಾಬ್ಲೆಟ್, ಬ್ರೌನ್ ಶುಗರ್ ಯಾವುದೇ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ದೃಷ್ಟಿಯಲ್ಲಿ ಹೈ ಪ್ರೊಫೈಲ್- ಲೋ ಪ್ರೊಫೈಲ್ ಎನ್ನೋದಿಲ್ಲ, ಯಾವ ಪ್ರೊಫೈಲನ್ನೂ ನೋಡುವುದಿಲ್ಲ. ಯಾರೇ ಆದರೂ ನಮ್ಮ ದೃಷ್ಟಿಯಲ್ಲಿ ಆರೋಪಿಗಳೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ. ಡ್ರಗ್ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಅಭಿಯಾನವನ್ನೂ ಆರಂಭಿಸುತ್ತೇವೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದರು.
ಕೋವಿಡ್ನಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ 48 ತಾಸಿನೊಳಗೆ ಪರಿಹಾರ :
ಈವರೆಗೂ ರಾಜ್ಯದಲ್ಲಿ 9,500 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ಈ ಪೈಕಿ 1,500 ಜನ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 88 ಪೊಲೀಸ್ ಸಿಬ್ಬಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ 48 ಗಂಟೆಗಳ ಒಳಗಾಗಿ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲಿದ್ದೇವೆ. ಕೋವಿಡ್ ಇನ್ನೂ ಮುಗಿದಿಲ್ಲ, ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಸಿಬ್ಬಂದಿಗೆ ಸೂಚಿಲಾಗಿದೆ ಎಂದರು.