ಕಲಬುರಗಿ: ನಗರದ ಜಾಫರಬಾದ್ ಪ್ರದೇಶದ ಸರ್ವೆ ನಂಬರ್ 21/1ರಲ್ಲಿನ ಇಪ್ಪತ್ತೆರಡು ಎಕರೆ ಪ್ರದೇಶದಲ್ಲಿರುವ ಅಕ್ರಮ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಸರ್ಕಾರಿ ಜಮೀನನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ, 31 ಅನಧಿಕೃತ ಮನೆಗಳನ್ನ ಭಾನುವಾರ ಬೆಳ್ಳಂಬೆಳಗ್ಗೆ ತೆರವುಗೊಳಿಸಲಾಗಿದೆ. ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸರ ಭದ್ರತೆಯಲ್ಲಿ ಮನೆಗಳು ಮತ್ತು ಕೆಲ ವಾಣಿಜ್ಯ ಮಳಿಗೆಗಳನ್ನ ನೆಲಸಮಗೊಳಿಸಲಾಯಿತು.
ಮನೆಗಳನ್ನ ತೆರವುಗೊಳಿಸುವಂತೆ ಅಧಿಕಾರಿಗಳು ವಾರದ ಹಿಂದೆ ಜಾಫರಬಾದ್ ನಿವಾಸಿಗಳಿಗೆ ನೋಟಿಸ್ ನೀಡಿದ್ದರು. ಭಾನುವಾರ ಬೆಳ್ಳಂಬೆಳಗ್ಗೆ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನ ಮಾರ್ಕ್‌ಔಟ್ ಮಾಡಿ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಕಳೆದ 17 ವರ್ಷಗಳ ಹಿಂದೆ ಜಾಫರಬಾದ್ ಮೂಲದ ಶಿವಪುತ್ರ ಬಂಡೆ ಎಂಬ ವ್ಯಕ್ತಿಯೋರ್ವ 22 ಎಕರೆ ಸರ್ಕಾರಿ ಜಮೀನು ತನ್ನದೇ ಎಂದು 1.30 ಲಕ್ಷ ರೂಪಾಯಿಗೆ ಒಂದು ಸೈಟ್ ಕೊಡ್ತಿನಿ ಅಂತಾ ಜನರಿಗೆ ನಂಬಿಸಿ ಪಂಗನಾಮ ಹಾಕಿದ್ದನಂತೆ.
ಕಲಬುರಗಿಯ ಜಾಫರಬಾದ್ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ ಜನರು ಕೂಡ ಕಡಿಮೆ ಬೆಲೆಗೆ ಸೈಟ್ ಸಿಗ್ತಿವೆ ಎಂದು ದಾಖಲೆಗಳನ್ನ ನೋಡದೇ ಖರೀದಿಸಿದ್ದಾರೆ. ನಂತರ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಸಹ ಸರ್ಕಾರಿ ಜಮೀನು ಅನ್ನೋದನ್ನ ಪರಿಶೀಲನೆ ಮಾಡದೇ ಖಾತಾ ಮತ್ತು ಮೋಟೆಷನ್ ಮಾಡಿಕೊಟ್ಟು ಮನೆಗಳನ್ನ ಕಟ್ಟಿಕೊಳ್ಳಲು ಅನುಮತಿ ಪತ್ರ ಸಹ ನೀಡಿದ್ದಾರೆ ಎನ್ನಲಾಗ್ತಿದೆ. ಇತ್ತ ಜೆಸ್ಕಾಂ ಅಧಿಕಾರಿಗಳು ಸಹ ಹಿಂದು ಮುಂದು ನೋಡದೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಇದನ್ನೂ ಓದಿ:ಧಮ್ ಇದ್ರೆ ಮೋದಿ ಬೆಂಗಳೂರಲ್ಲಿ ಅಗ್ನಿಪಥ್ ಬಗ್ಗೆ ಸುದ್ದಿಗೋಷ್ಟಿ ಮಾಡಲಿ : ಪ್ರಿಯಾಂಕ್ ಖರ್ಗೆ ಸವಾಲು
ಇದೆಲ್ಲ ಒಂದು ಕಡೆಯಾದ್ರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇಲ್ಲಿಯ ಕೆಲ ಜನರಿಗೆ ಮನೆಗಳನ್ನ ಕಟ್ಟಿಸಿಕೊಳ್ಳಲು ಮೂರುವರೆ ಲಕ್ಷದಷ್ಟು ಸಹಾಯಧನ ಕೂಡ ನೀಡಲಾಗಿತ್ತು. ನಂತರ ಸಾಲ ಸೂಲ ಮಾಡಿ ಇಲ್ಲಿಯ ಜನ ಕಷ್ಟಪಟ್ಟು ಮನೆಗಳನ್ನ ಕಟ್ಟಿಕೊಂಡು ಇದೀಗ ಸೂರು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಅಂತಾ ನಿವಾಸಿಗಳು ಮನವಿ ಮಾಡಿದ್ದಾರೆ.