ಕಲಬುರಗಿ:ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರತಿ ಮನೆಗೂ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಜನ ವಿದ್ಯುತ್ ಶುಲ್ಕ ಕಟ್ಟಲು ನಿರಾಕರಣೆ ಮಾಡುತ್ತಿದ್ದಾರೆ. ಈ ನಡುವೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಬಾಕಿ ಕರೆಂಟ್ ಬಿಲ್ ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಜೆಸ್ಕಾಂನ ಜೆಇ ಮತ್ತು ಲೈನ್ಮೆನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಆಳಂದ ಪಟ್ಟಣದ ಸೋನಾರ್ ಕಾಲೋನಿಯ ನಿವಾಸಿ ವಸೀಂ ಕಳೆದ ಆರು ತಿಂಗಳಿಂದ ತನ್ನ ಮನೆಯ ಮತ್ತು ತನ್ನ ಢಾಬಾದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ. ಇದನ್ನೂ ಕಟ್ಟಿಸಿಕೊಳ್ಳಲು ಜೆಇ ಸಿದ್ರಾಮಪ್ಪ ಮತ್ತು ಲೈನ್ ಮೆನ್ ಇಜಾಜ್ ಬುಧವಾರ (ನಿನ್ನೆ) ವಸೀಂ ಮನೆಗೆ ತೆರಳಿ. ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಹೇಳಿದ್ದಾರೆ. ಆದರೆ, ವಿದ್ಯುತ್ ಶುಲ್ಕವನ್ನು ಕಟ್ಟುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿ ಜೊತೆ ವಸೀಂ ವಾದ ಮಾಡಿದ್ದಾನೆ.
ಬಾಕಿ ಕರೆಂಟ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡಲು ಮುಂದಾದಾಗ, ವಸೀಂ ಜೆಇ ಸಿದ್ರಾಮಪ್ಪ ಮತ್ತು ಜೆಇ ಇಜಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು, ಮತ್ತು ಕಬ್ಬಿಣದ ರಾಡ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಜೆಇ ಸಿದ್ರಾಮಪ್ಪಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.