ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ಜನ ಎರಡನೇ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಸಿಕೆ ಪಡೆಯುವ ಬಗ್ಗೆ ಜಿಲ್ಲಾಧಿಕಾರಿ ಮಾತು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಮುಂದೆ ಬರುತ್ತಿಲ್ಲ. ಜಿಲ್ಲೆಯಾದ್ಯಂತ ಇದುವರೆಗೆ 3,31,259 ಜನರಿಗೆ ಲಸಿಕೆ ನೀಡಲಾಗಿದೆ. ಒಟ್ಟು 17 ಪ್ರತಿಶತ ಜನ ಲಸಿಕೆ ಪಡೆದಂತಾಗಿದೆ. ಇದರಲ್ಲಿ 66, 991 ಜನ ಮಾತ್ರ ಸೆಕೆಂಡ್ ಡೋಸ್ ಪಡೆದಿದ್ದಾರೆ. ಆದರೆ, ಕೊರೊನಾದಿಂದ ರಕ್ಷಣೆ ಪಡೆಯಲು ಎರಡನೇ ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎಂದರು.
ಫಸ್ಟ್ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆಯಲು ಮೊಬೈಲ್ಗಳಿಗೆ ಸಂದೇಶ ರವಾನಿಸುವುದರ ಜೊತೆಗೆ ಕರೆ ಮಾಡಿ ಕೂಡ ನೆನಪಿಸಲಾಗುತ್ತಿದೆ. ಆದರೂ ಲಸಿಕೆ ಪಡೆಯಲು ಜನ ಮುಂದೆ ಬರುತ್ತಿಲ್ಲ ಎಂದು ತಿಳಿಸಿದ ಅವರು, ಮೊದಲನೇ ಲಸಿಕೆ ಪಡೆದವರು ತಪ್ಪದೇ ಎರಡನೇ ಲಸಿಕೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಜಿಮ್ಸ್ ಆಸ್ಪತ್ರೆ ನಿರ್ದೇಶಕರಿಗೆ ಶೋಕಾಸ್ ನೋಟಿಸ್
ಜಿಮ್ಸ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಭದ್ರತೆ ವೈಫಲ್ಯ ಎದ್ದು ಕಾಣುತ್ತಿದೆ. ಹೀಗಾಗಿ ಜಿಮ್ಸ್ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಕೊರೊನಾ ಸೋಂಕಿತ ಮಹಿಳೆ ಅತ್ಯಾಚಾರ ಯತ್ನ ಪ್ರಕರಣ ಹಾಗೂ ಸಾವಿನ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದೆ. ತನಿಖೆಯ ನಂತರ ನಿಖರ ಕಾರಣ ತಿಳಿದುಬರಲಿದೆ ಎಂದು ಜಿಲ್ಲಾಧಿಕಾರಿ ಜ್ಯೋತ್ಸ್ನಾ ಹೇಳಿದ್ದಾರೆ.