ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸೀಲ್ಡೌನ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬಿ.ಶರತ್ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮದ ಕುರಿತು ಪರಿಶೀಲನೆ ನಡೆಸಿದರು.
ಕೊರೊನಾ ಕಲಬುರಗಿ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ. ಇದನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಶಹಾಬಾದ್ ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಕಂಟೈನ್ಮೆಂಟ್ ಝೋನ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವಾರ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ವಾಡಿ ಪಟ್ಟಣದ ಸೀಲ್ಡೌನ್ ಪ್ರದೇಶಕ್ಕೆ ತೆರಳಿ ಪ್ರಸ್ತುತ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ರಾವೂರು ಗ್ರಾಮಕ್ಕೆ ಡಿಸಿ ಭೇಟಿ, 220 ಜನರ ವಿರುದ್ದ ಕೇಸ್:
ನಿಷೇಧಾಜ್ಞೆ ಉಲ್ಲಂಘಿಸಿ ಜಾತ್ರಾ ಮಹೋತ್ಸವ ನಡೆಸಿದ ರಾವೂರು ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಜೊತೆ ಜಿಲ್ಲಾಧಿಕಾರಿ ಭೇಟಿ ನೀಡಿ ಗ್ರಾಮದ ಸ್ಥಿತಿಗತಿ ಅವಲೋಕಿಸಿದರು. ಕಾನೂನು ಉಲ್ಲಂಘಿಸಿ ಸಿದ್ಧಲಿಂಗೇಶ್ವರ ಜಾತ್ರೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 220 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ 13 ಜನರನ್ನು ವಾಡಿ ಪೊಲೀಸರು ಬಂಧಸಿದ್ದಾರೆ. ರಾವೂರು ಗ್ರಾಮವನ್ನು 14 ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಜೊತೆಗೆ ಗ್ರಾಮದ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಿಸುಲು ನಿರ್ಧರಿಸಿದ್ದಾರೆ.