ಕಲಬುರಗಿ :ತುಂಬಿ ಹರಿಯುತ್ತಿರುವ ಕಾಗಿಣಾ ನದಿಯಿಂದಾಗಿ ಸೇತುವೆ ತಡೆ ಗೋಡೆಯ ಪೈಪ್ಗಳು ಕೊಚ್ಚಿಕೊಂಡು ಹೋಗಿವೆ. ಹಾಗಾಗಿ,ಪ್ರಾಣ ಕೈಯಲ್ಲಿ ಹಿಡಿದುಕೊಂಡು ವಾಹನ ಸವಾರರು ಸೇತುವೆ ಮೇಲೆ ಸಂಚರಿಸ್ತಿದ್ದಾರೆ. ಇದು ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 10ರ ಸೇತುವೆ ಕತೆ.
ಅಪಾಯವನ್ನು ಆಹ್ವಾನಿಸುತ್ತಿದೆ ಈ ಸೇತುವೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಸೇಡಂ ತಾಲೂಕಿನ ಮಳಖೇಡ ಬಳಿಯ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಪ್ರವಾಹದ ಹೊಡೆತಕ್ಕೆ ನಲುಗಿದೆ.ಸೇತುವೆಯ ಭಾಗಶಃ ತಡೆಗೋಡೆಯ ಪೈಪ್ಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಪ್ರಾಣ ಬಲಿಗೆ ಕಾದು ನಿಂತಿದೆ.
ಸೇತುವೆ ಮೇಲೆ ಸಿಂಗಲ್ ರಸ್ತೆ ಇರೋದ್ರಿಂದ ದೊಡ್ಡ ಗಾತ್ರದ ಎರಡು ವಾಹನಗಳು ಸಂಚರಿಸೋದು ತುಂಬಾ ಅಪಾಯ. ಸೇತುವೆ ಮೇಲೆ ಸಂಚರಿಸುವ ವೇಳೆ ಚಾಲಕ ಕೊಂಚ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ರಾತ್ರಿ ವೇಳೆ ಈ ಸೇತುವೆಯಲ್ಲಿ ಸಂಚರಿಸೋದು ತೀರಾ ಅಪಾಯ. ಆದ್ರೂ ಅನಿವಾರ್ಯವಾಗಿ ವಾಹನ ಸವಾರರು ಪ್ರಾಣ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ.
1942ರಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಮಹಾರಾಷ್ಟ್ರದ ವಾಗ್ಧರಗಿಯಿಂದ ತೆಲಂಗಾಣದ ರಿಪ್ಪನಪಲ್ಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 10 ಇದಾಗಿದೆ. ಕಲಬುರಗಿಯಿಂದ ಸೇಡಂಗೆ ತೆರಳು ಮುಖ್ಯ ರಸ್ತೆಯಾಗಿದೆ. ದಿನದ 24 ಗಂಟೆಯೂ ಈ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತವೆ. ಸೇತುವೆ ಕೆಳಮಟ್ಟದಲ್ಲಿರುವ ಕಾರಣ ಹಾಗೂ ಸೇತುವೆ ಶಿಥಿಲ ಹಂತಕ್ಕೆ ತಲುಪಿರುವ ಕಾರಣ ಪಕ್ಕದಲ್ಲೇ ಮತ್ತೊಂದು ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಕಳೆದ ಹಲವು ವರ್ಷಗಳ ಹಿಂದೆ ಈ ರಸ್ತೆಯನ್ನ ಜಿವಿಆರ್ ಟೋಲ್ಗೆ ನಿರ್ವಹಣಾ ಜವಾಬ್ದಾರಿ ನೀಡಲಾಗಿದೆ. ಆದ್ರೀಗ ಸೇತುವೆಯ ತಡೆಕಂಬಗಳು ಕಿತ್ತು ಹೋಗಿ ಅಪಾಯದ ಸಿಗ್ನಲ್ ಕೊಡ್ತಿದೆ. ಸವಾರರು ಯಾವಾಗ ಅನಾಹುತ ಸಂಭವಿಸುತ್ತೋ ಅನ್ನೋ ಭಯದಲ್ಲಿಯೇ ಸಂಚರಿಸುವಂತಹ ಪರಿಸ್ಥಿತಿ ಇದೆ. ಪ್ರಾಣ ಬಲಿಗಾಗಿ ಸೇತುವೆ ಬಾಯ್ತೆರೆದು ನಿಂತು ಅಪಾಯದ ಸಿಗ್ನಲ್ ಕೊಡ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡದೆ ಜನರ ಪ್ರಾಣದ ಜೊತೆ ಚೆಲ್ಲಾಟ ಆಡ್ತಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ ಟೋಲ್ ಸಿಬ್ಬಂದಿ ಆಗಲಿ, ಪೊಲೀಸ್ ಸಿಬ್ಬಂದಿಯನ್ನಾಗ್ಲಿ ಸೇತುವೆ ಬಳಿ ನಿಯೋಜಿಸಿಲ್ಲ. ಈ ಸಮಸ್ಯೆ ಕುರಿತು ರಾಜ್ಯ ಹೆದ್ದಾರಿ ಪ್ರಾಧಿಕಾರದ ಬಳಿ ಅವಧಿಯನ್ನ ಕೇಳಿದ್ರೆ ಎರಡು ಅಥವಾ ಮೂರು ದಿನಗಳಲ್ಲಿ ತಡೆಕಂಬಗಳನ್ನ ಹಾಕುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಹೊಸದಾಗಿ ನಿರ್ಮಿಸುತ್ತಿರುವ ಸೇತುವ ಸಿದ್ಧಗೊಳ್ಳಲು ಕನಿಷ್ಟ ಅಂದ್ರೂ ಆರೇಳು ತಿಂಗಳು ಬೇಕು. ಅಲ್ಲಿವರೆಗಾದ್ರೂ ಇರುವ ಸೇತುವೆ ಮೇಲೆ ತಕ್ಷಣ ತಡೆಗೋಡೆ ಪೈಪ್ ಅಳವಡಿಸಿ ಆಗಬಹುದಾದ ಭಾರಿ ಅನಾಹುತ ತಪ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ.