ಕಲಬುರಗಿ :ಕಲಬುರಗಿ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ನಗರದ ಅಭಿವೃದ್ಧಿಗಾಗಿ ನೂರು ಕೋಟಿ ರೂ. ಅನುದಾನ ಸರ್ಕಾರದಿಂದ ಹರಿದು ಬರುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ಕೋಟಿ ಕೋಟಿ ಹಣ ರಸ್ತೆಗೆ ಬಿಡುಗಡೆಯಾಗುತ್ತಿದೆ. ನಗರದಲ್ಲಿ ಮಾತ್ರ ಸಮರ್ಪಕ ರಸ್ತೆಗಳು ಇಲ್ಲ. ರಸ್ತೆಯಲ್ಲಿ ತಿರುಗಾಡುವವರು ಕೊಂಚ ಎಡವಿದ್ರೂ ಮೈ ಕೈ ಮುರಿದುಕೊಂಡು ಆಸ್ಪತ್ರೆ ಸೇರುವ ಸ್ಥಿತಿ ಇದೆ.
ಕಲಬುರಗಿ ರಸ್ತೆಗಳಲ್ಲಿ ತಗ್ಗು ಗುಂಡಿಯದ್ದೇ ಕಾರುಬಾರು.. ನಗರದಲ್ಲಿನ ಹಲವು ರಸ್ತೆಗಳು ತಗ್ಗು ಗುಂಡಿಯಿಂದ ಕೂಡಿವೆ. ಮೇಲಾಗಿ ಮಳೆಗಾಲವಾದ್ದರಿಂದ ಮತ್ತುಷ್ಟು ರಸ್ತೆಗಳು ಹದಗೆಟ್ಟಿವೆ. ಮಳೆ ನೀರು ನಿಂತು ಗುಂಡಿಗಳು ಗೊತ್ತಾಗದೆ ಬೈಕ್ ಸವಾರರು ಮೂಳೆ ಮುರಿದುಕೊಂಡು ಆಸ್ಪತ್ರೆ ಪಾಲಾಗಿರುವ ಹಲವು ನಿದರ್ಶನಗಳಿವೆ. ಪಾಲಿಕೆ ವ್ಯಾಪ್ತಿಯ ಹೀರಾಪುರ ರಸ್ತೆ ದಾಟಲು ಹರಸಾಹಸ ಮಾಡುವ ಪರಿಸ್ಥಿತಿ ಇದೆ. ರಿಂಗ್ ರಸ್ತೆ ಕೂಡ ಇದಕ್ಕೆ ಹೊರತಾಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಲಿಕೆಯಿಂದ ಕೊರೊನಾ ಆರಂಭದಿಂದ ಈವರೆಗೆ ಯಾವುದೇ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕಳೆದ ಸಾಲಿನಲ್ಲಿ ನಗರದ ಹಲವಡೆ ಕೈಗೊಂಡ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, 11 ಚಿಕ್ಕಪುಟ್ಟ ರಸ್ತೆ ಕಾಮಗಾರಿ ಬಾಕಿ ಉಳಿದಿವೆ. ಸೆಪ್ಟೆಂಬರ್ ಅಂತ್ಯದವರೆಗೆ ಕಾಮಗಾರಿ ಮುಗಿಯಲಿವೆ. ಪಾಲಿಕೆಗೆ ಬಂದಿದ್ದ ₹150 ಕೋಟಿ ಸರ್ಕಾರ ಕೊರೊನಾ ಕಾರ್ಯಕ್ಕಾಗಿ ಹಿಂಪಡೆದಿದೆ.
ಹೆಚ್ಕೆಡಿಬಿಯಿಂದ ಕಳೆದ ಸಾಲಿನಲ್ಲಿ ಹಾಗೂ ಈ ಸಾಲಿನಲ್ಲಿ ಯಾವುದೇ ಹಣ ಬಂದಿಲ್ಲ. ಈ ವಾರದಲ್ಲಿ ರಸ್ತೆ ದುರಸ್ಥಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಪ್ಲಾನ್ ಕೈಗೊಂಡು ಸೆಪ್ಟೆಂಬರ್ ತಿಂಗಳಿನಲ್ಲಿ ರಸ್ತೆ ದುರಸ್ಥಿ ಕಾಮಗಾರಿಗಳ ಟೆಂಡರ್ ಕರೆಯಲಾಗುವುದು. ಸರ್ಕಾರದಿಂದ ₹150 ಕೋಟಿ ಅನುದಾನ ಮರಳಿ ಬಂದ್ರೆ ಬಹುತೇಕ ರಸ್ತೆಗಳ ಕಾಮಗಾರಿ ನಡೆಸಲಾಗುವುದು.
ಸದ್ಯಕ್ಕೆ ಪ್ರಮುಖ ರಸ್ತೆಯಾದ ವಲ್ಲಬ್ ಭಾಯಿ ವೃತ್ತದಿಂದ ಮಾರುಕಟ್ಟೆವರೆಗೆ ಡಾಂಬರರೀಕರಣ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೋಟಿ ಕೋಟಿ ಅನುದಾನ ಹರಿದು ಬರುತ್ತಿದ್ದರೂ ಕಲಬುರಗಿ ನಗರದಲ್ಲಿ ರಸ್ತೆಗಳ ಹೀನಾಯ ಸ್ಥಿತಿಯಿಂದಾಗಿ ಸ್ಥಳೀಯರು ಹಿಡಿಶಾಪ ಹಾಕುವಂತಾಗಿದೆ.