ಕಲಬುರಗಿ:ರಾಜ್ಯ ವಿಧಾನಸಭೆ ಚುನಾವಣೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡಿದೆ. ಚುನಾವಣೆ ಹಿನ್ನೆಲೆ ಉದ್ಯೋಗ ಖಾತ್ರಿಯ ಕೂಲಿ ಕಾರ್ಮಿಕರಿಗೆ ಕಳೆದ ಒಂದೂವರೇ ತಿಂಗಳಿಂದ ಕೂಲಿ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಕೂಲಿ ಹಣ ಸಿಗದೇ ನಾನಾ ಸಮಸ್ಯೆ ಎದುರಿಸುತ್ತಿರೋ ಕಲಬುರಗಿ ಜಿಲ್ಲೆಯ ಕೂಲಿ ಕಾರ್ಮಿಕರು ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿದರು.
ದುಡಿಯುವ ಕೈಗಳಿಗೆ ಕೆಲಸ ನೀಡಲು ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಉದ್ಯೋಗ ಖಾತ್ರಿ ಯೋಜನೆ ಹಲವು ಕಡೆಗಳಲ್ಲಿ ಸರಿಯಾಗಿ ಅನುಷ್ಠಾನ ಆಗದೆ ಕೂಲಿಕಾರಿಗೆ ಕೆಲಸ ಸಿಗದೆ ಪರದಾಡುವಂತಾಗಿದೆ. ಅಲ್ಲದೆ ಉದ್ಯೋಗ ಖಾತ್ರಿಯಲ್ಲಿನ ಭ್ರಷ್ಟಾಚಾರ ಕೂಡ ತಾಂಡವವಾಡ್ತಿದೆ. ಅಂದಹಾಗೆ ರಾಜ್ಯದಲ್ಲಿ ಜರುಗಿದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೆಲಸ ಮಾಡಿರುವ ಕೂಲಿಕಾರರಿಗೆ ಕಳೆದ ಒಂದೂವರೇ ತಿಂಗಳಿಂದ ಕೂಲಿ ಹಣ ಬೀಡುಗಡೆ ಮಾಡಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಕೂಲಿ ಹಣ ಸಿಗದೇ ಪರದಾಡ್ತಿರುವ ಸಾವಿರಾರು ಕೂಲಿ ಕಾರ್ಮಿಕರು ನಾನಾ ರೀತಿಯ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಕೆಲಸ ಮಾಡಿ ಕೂಲಿ ಹಣ ಸಿಗದೆ ಕಷ್ಟ ಎದುರಿಸುತ್ತಿರುವ ನೂರಾರು ಕೂಲಿ ಕಾರ್ಮಿಕರು ಹಣ ಬಿಡುಗಡೆ ಮಾಡುವಂತೆ, ಕರ್ನಾಟಕ ಪ್ರಾಂತ್ಯ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘಟನೆ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.