ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡು ಹೋಟೆಲ್ ಧಗ ಧಗನೆ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸಂಗಣ್ಣಾ ಬಳವಡಗಿ ಎಂಬುವರಿಗೆ ಸೇರಿದ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಹೋಟೆಲ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಟಕಲ್ ಗ್ರಾಮದಲ್ಲಿ ಹೊತ್ತಿ ಉರಿದ ಹೋಟೆಲ್ ಸಂಗಣ್ಣ ಬಳವಡಗಿ ಕುಟುಂಬಸ್ಥರು ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಹೋಟೆಲ್ ಬೆಂಕಿಗಾಹುತಿ ಆಗಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಕೂಡಲೇ ಸಂಗಣ್ಣನವರ ನೆರವಿಗೆ ಬಂದು ಪರಿಹಾರ ನೀಡಬೇಕು ಎಂದು ಹೋರಾಟಗಾರ ಶರಣಬಸಪ್ಪ ಮಮ್ಮಶೆಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.