ಕಲಬುರಗಿ: ಅನರ್ಹರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಆಪರೇಷನ್ ಕಮಲ ಜಗಜ್ಜಾಹೀರವಾಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಮತ್ತೆ ವಾಗ್ದಾಳಿ! - ಕಲಬುರಗಿಯಲ್ಲಿ ಸಿ.ಟಿ ರವಿ ಪ್ರತಿಕ್ರಿಯೆ
ಅನರ್ಹರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಆಪರೇಷನ್ ಕಮಲ ಜಗಜ್ಜಾಹೀರಾಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಹಿಂದೆ ಜೆಡಿಎಸ್ ಪಕ್ಷ ಒಡೆದು ರಾಜ್ಯಸಭೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿ, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಬಾಲಕೃಷ್ಣ, ಅವರನ್ನು ತಮ್ಮ ಪಕ್ಷದತ್ತ ಹೇಗೆ ಸೇರಿಸಿಕೊಂಡಿದ್ದಾರೆ ಹಾಗೆ ನಾವು ಕೂಡ ಈಗ ಸೇರಿಸಿಕೊಂಡಿದ್ದೇವೆ. ನೈತಿಕತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಆವಾಗ ಯಾವ ನೈತಿಕ ಮಾರ್ಗದಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು ಎಂದು ಪ್ರಶ್ನಿಸಿದರು. ಅವರು ಮಾಡಿದಂತೆ ನಾವು ಮಾಡಿದ್ದೇವೆ. ಮುಳ್ಳು ಮುಳ್ಳಿನಿಂದ ತೆಗೆಯುವುದೇ ರಾಜಕಾರಣ ಎಂದರು.
ಇನ್ನು ಅನರ್ಹರು ರಾಜೀನಾಮೆ ನೀಡಿದ ಹಿನ್ನೆಲೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದಿದೆ. ರಾಜೀನಾಮೆ ನೀಡಿ ಅವರು 4 ತಿಂಗಳು ಪಡಬಾರದ ಕಷ್ಟ ಪಟ್ಟಿದ್ದಾರೆ. ಅವರಿಗೆ ಟಿಕೆಟ್ ನೀಡಲು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಪಕ್ಷದ ಮುಖಂಡರು ತೀರ್ಮಾನಕ್ಕೆ ನಮ್ಮ ಸಹಮತವಿದೆ ಎಂದು ಟಿಕೆಟ್ ಹಂಚಿಕೆ ಸಮರ್ಥಿಸಿಕೊಂಡರು. ಸಹಜವಾಗಿಯೇ ಗೆಲ್ಲುವ ಅವಕಾಶ ಹೆಚ್ಚಿದ್ದ ಕಡೆ ಸ್ಪರ್ಧಾಕಾಂಕ್ಷಿಗಳು ಸಂಖ್ಯೆಯೂ ಹೆಚ್ಚಿರುತ್ತದೆ. ಈ ಹಿಂದೆ ಬಿಜೆಪಿ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಅವರು ಗೆದ್ದಿದ್ದರೆ ನಾವು 14 ತಿಂಗಳು ವನವಾಸ ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ. ಹೀಗಾಗಿ ಇದೊಂದು ವಿಶೇಷ ಸಂದರ್ಭ ಈಗ ಸಾಮಾನ್ಯ ರೀತಿಯಲ್ಲಿ ಯೋಚಿಸಲು ಆಗಲ್ಲ ಎಂದರು. ಸದ್ಯ ರಾಜ್ಯದ ಜನತೆಗೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಬೇಕಾಗಿಲ್ಲ, ಹೀಗಾಗಿ ರಾಜ್ಯದ ಜನ ಬಿಜೆಪಿ ಗೆಲ್ಲಿಸಿದ್ದಾರೆ ಎಂದು ಸಿಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.