ಕಲಬುರಗಿ: ಕೃಷಿಕರ ಮೇಲೆ ಕನಿಕರವಿಲ್ಲದೇ ಆರ್ಭಟಿಸಿರುವ ಮಳೆರಾಯನ ಅಬ್ಬರಕ್ಕೆ ಈ ಬಾರಿ ಕಲಬುರಗಿ ಜಿಲ್ಲೆ ಕಂಗಾಲಾಗಿದೆ. ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಸುರಿದ ಧಾರಾಕಾರ ಮಳೆಗೆ ರೈತನ ಬದುಕು ಬೀದಿಗೆ ಬಂದಿದೆ.
ಮುಂಗಾರು ಬೆಳೆ ಜೊತೆಗೆ ತೋಟಗಾರಿಕೆ ಬೆಳೆ ಕೂಡ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ತರಕಾರಿ ಬೆಳೆ ಬೆಳೆದು , ಅದರಿಂದಲೇ ಬದುಕು ಕಟ್ಟಿಕೊಂಡಿದ್ದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಮೀನಿನಲ್ಲಿ ಅಪಾರ ನೀರು ತುಂಬಿಕೊಂಡು ತರಕಾರಿ ಬೆಳೆ ಜಮೀನಲ್ಲೇ ಕೊಳೆತು ಹೋಗಿದೆ. ಎರಡೆರಡು ಬಾರಿ ತರಕಾರಿ ಬೆಳೆದ್ರೂ ಮಳೆಯಿಂದಾಗಿ ತರಕಾರಿ ಸಂಪೂರ್ಣ ಹಾಳಾಗಿದೆ. ಸಾಲ ತಂದು ಬೆಳೆದ ಬೆಳೆಯನ್ನು ವರುಣನ ಹೊಡೆತಕ್ಕೆ ಕಳೆದುಕೊಂಡು ಕಂಗಾಲಾಗಿರುವ ರೈತರು ಸರ್ಕಾರ ನೀಡುವ ಪರಿಹಾರದತ್ತ ಮುಖಮಾಡಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷ ಮಳೆ ಆರ್ಭಟಕ್ಕೆ ಉದ್ದು, ಹೆಸರು, ತೊಗರಿ, ಸಜ್ಜೆ, ಎಳ್ಳು ಹೀಗೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮುಂಗಾರು ಬೆಳೆ ಹಾನಿಯಾಗಿದೆ. ಎನ್ ಡಿಆರ್ಎಫ್ ನಿಯಮ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 61 ಕೋಟಿಯಷ್ಟು ಮುಂಗಾರು ಬೆಳೆ ಹಾನಿಯಾಗಿದೆ. ಮುಂಗಾರು ಬೆಳೆ ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಕೂಡ ಹಾನಿಯಾಗಿದೆ. ಜಿಲ್ಲೆಯ ಒಟ್ಟು 1196 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದ್ದು, ನಿರಂತರ ಮಳೆಗೆ ಈವರೆಗೆ ಜಿಲ್ಲೆಯಲ್ಲಿ ಬಾಳೆ, ದಾಳಿಂಬೆ, ಹೂವು, ಪಪ್ಪಾಯ, ಬದನೆ ಹೀಗೆ ಒಟ್ಟು 1591 ರೈತರು ಬೆಳೆದ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸರ್ವೆ ಪ್ರಕಾರ, ಎನ್ಡಿಆರ್ಎಫ್ ನಾರ್ಮ್ಸ್ ಪ್ರಕಾರ ಒಟ್ಟು 2 ಕೋಟಿ 22 ಲಕ್ಷದಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜೊತೆಗೆ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನೆಲಕಚ್ಚಿದ್ದು, ಇನ್ನೂ ಸರ್ವೆ ಕಾರ್ಯ ನಡೆಯುತ್ತಿದೆ. ಮುಂಗಾರು ಹಾಗು ತೋಟಗಾರಿಕೆ ಬೆಳೆ ಸೇರಿ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಒಟ್ಟು 63 ಕೋಟಿಗೂ ಅಧಿಕ ಬೆಳೆ ಹಾನಿಯಾಗಿದೆ. ಅತಿವೃಷ್ಟಿಯ ಹೊಡೆತಕ್ಕೆ ಅನ್ನದಾತ ಅಕ್ಷರಶಃ ನಲುಗಿ ಹೋಗಿದ್ದಾನೆ.