ಕಲಬುರಗಿ :ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಜಲಾಶಯದ ಕಾಲುವೆ ಒಡೆದು ನೂರಾರು ಎಕರೆ ರೈತರ ಜಮೀನಿಗೆ ನೀರು ನುಗ್ಗಿದೆ. ಇದರಿಂದ ರೈತರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಅರಣಕಲ್ ಗ್ರಾಮದ ಬೆಳಕೋಟಾ ಜಲಾಶಯದಿಂದ ನೀರು ಬಿಟ್ಟಿದ್ದಾರೆ. ನೀರಿನ ರಭಸಕ್ಕೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನಿಗೆ ನುಗ್ಗಿದ್ದು, ನೂರಾರು ಎಕರೆಯಲ್ಲಿ ಬೆಳೆದಿದ್ದ ತೊಗರಿ, ಹೆಸರು, ಉದ್ದು, ಸೋಯಾ ಸೇರಿ ಮುಂಗಾರು ಬೆಳೆ ಕೊಚ್ಚಿ ಹೋಗಿದೆ. ರೈತರ ಜಮೀನಿನಲ್ಲಿ ಒಂದು ಅಡಿಗೂ ಹೆಚ್ಚು ನೀರು ಶೇಖರಣೆ ಆಗಿ ಬೆಳೆ ಕೊಳೆಯುತ್ತಿದೆ.
ಅಧಿಕಾರಿಗಳ ವಿರುದ್ಧ ರೈತರ ಆರೋಪ :ಸಾಲ ಮಾಡಿಕೊಂಡು ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಕಳೆದುಕೊಂಡು ಅನ್ನದಾತರು ಅಕ್ಷರಶಃ ದಿಕ್ಕೂ ತೋಚದೆ ಕಂಗಾಲಾಗಿದ್ದಾರೆ. ಈ ಎಲ್ಲಾ ಅನಾಹುತಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರ ಕಳಪೆ ಕಾಮಗರಿಯಿಂದ ನಿರ್ಮಿಸಿರುವ ಕಾಲುವೆಗಳು ಕಾರಣ. ಕಾಲುವೆ ಒಡೆದು ನೀರು ನುಗ್ಗಿ ಬೆಳೆ ಹಾನಿಯಾಗಿದೆ.