ಕಲಬುರಗಿ: ಜಿಲ್ಲೆಯಲ್ಲಿ ಈ ವರ್ಷ ಎಡೆಬಿಡದೆ ವರುಣ ಅಬ್ಬರಿಸುತ್ತಿದ್ದು, ಅನ್ನದಾತನ ಬದುಕು ಕೊಚ್ಚಿಹೋಗಿದೆ. ಬರೋಬ್ಬರಿ 89 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ವರ್ಷದ ವಾಡಿಕೆಗಿಂತ 200 ಮಿ.ಮೀ. ಹೆಚ್ಚಿನ ಮಳೆಯಾಗಿದೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಉದ್ದು, ಹೆಸರು, ತೊಗರಿ, ಸಜ್ಜೆ, ಹತ್ತಿ, ಶೇಂಗಾ ಸೇರಿದಂತೆ ಹಲವು ಮುಂಗಾರು ಬೆಳೆಗಳು ನಾಶವಾಗಿವೆ.
ಮಳೆಗೆ 89 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಕಳೆದೊಂದು ವಾರದಲ್ಲಿ ಸುರಿದ ಭಾರಿ ಮಳೆಗೆ ಮತ್ತೆ ಸುಮಾರು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆ ಹಾನಿಗೊಳಗಾಗಿದೆ.
ವಾಡಿ ಪಟ್ಟಣದ ಸುತ್ತಲಿನ ಬಳವಡಗಿ ಗ್ರಾಮ ಸೇರಿ ಸುಮಾರು ಹತ್ತಾರು ಹಳ್ಳಿಗಳು ಜಲಾವೃತವಾಗಿ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ಇತ್ತ ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು, ಸೇಡಂ ತಾಲೂಕಿನ ಮಳಖೇಡ ಬಳಿಯ ಸೇತುವೆ ಮುಳುಗಡೆಯಾಗಿದೆ. ಕಾಳಗಿಯ ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತವಾಗಿ ದೇವಸ್ಥಾನದ ಗರ್ಭಗುಡಿಯೊಳಗೂ ಮಳೆ ನೀರು ನುಗ್ಗಿದೆ. ಹಲವೆಡೆ ಮಳೆ ನೀರಿಗೆ ಅವಘಡಗಳು ಸಂಭವಿಸಿದ್ದು, ಜನಸಾಮಾನ್ಯರು ನಲುಗಿ ಹೋಗಿದ್ದಾರೆ.