ಕಲಬುರಗಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಸೇತುವೆಗಳು ಜಲಾವೃತವಾಗಿ ಜಿಲ್ಲೆಯ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಶಾಲೆಗೆ ತೆರಳಿದ ಮಕ್ಕಳು, ಜಮೀನುಗಳಿಗೆ ತೆರಳಿದ ರೈತರು ಮರಳಿ ಗ್ರಾಮಕ್ಕೆ ಹೋಗಲು ಪರದಾಡಿದ್ದಾರೆ.
ಮಳೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್:ಕಳೆದ ದಿನ ಮಧ್ಯಾಹ್ನದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಆಳಂದ ತಾಲೂಕಿನ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಕಲ್ಲಹಂಗರಗಾ ಗ್ರಾಮದ ಹೊರ ವಲಯದಲ್ಲಿರುವ ಹಳ್ಳ ತುಂಬಿ ಸೇತುವೆ ಮೇಲೆ ಹರಿಯುತ್ತಿದೆ. ಹೀಗಾಗಿ ಜಂಬಗಾ (ಬಿ) ಕ್ರಾಸ್, ಕಲ್ಲಹಂಗರಗಾ ಮಾರ್ಗವಾಗಿ ಚಿಂಚನಸೂರ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಕಡಿತಗೊಂಡಿದೆ.
ಶಾಲಾ ಮಕ್ಕಳಿಗೆ ಎದುರಾದ ಸಂಕಷ್ಟ:ಚಿಂಚೋಳಿ ತಾಲೂಕಿನಲ್ಲಿಯೂ ಮಳೆಯಿಂದ ಜನ ಪರದಾಡಿದ್ದಾರೆ. ಮಳೆಯಿಂದಾಗಿ ಕೋಡ್ಲಿ ಗ್ರಾಮದ ಮುಖ್ಯದ್ವಾರದ ಅಗಸಿ ಹತ್ರ ಸಣ್ಣ ಹಳ್ಳ ತುಂಬಿ ಹರಿಯುತ್ತಿದ್ದು, ಶಾಲೆಗೆ ತೆರಳಿದ ಶಾಲಾಮಕ್ಕಳು ಗ್ರಾಮದೊಳಗೆ ಹೋಗಲು ತೊಂದರೆ ಅನುಭವಿಸಬೇಕಾಯಿತು. ರೈತರು ಕೂಡಾ ಜಮೀನಿನಿಂದ ಗ್ರಾಮಕ್ಕೆ ಹೋಗಲು ಹರಸಾಹಸ ಪಟ್ಟರು. ಕುಕ್ಲೂರು ಭಂಟನಳ್ಳಿ ಗಡಿಕೇಶ್ವರ ಗ್ರಾಮದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗಡಿಕೇಶ್ವರ, ಭೂತ್ಪೂರ, ಚಿಂತಪಳ್ಳಿ ಗ್ರಾಮಗಳಲ್ಲಿ ನಾಲೆಗಳು ತುಂಬಿ ಹರಿದ ಪರಿಣಾಮ ಗ್ರಾಮಗಳ ಸಂಪರ್ಕ ಕಡಿತವಾಗಿದೆ.