ಕಲಬುರಗಿ: ಜೇವರ್ಗಿ ಶಾಸಕ, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮನೆಯ ಆವರಣದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಶರಣನಗರದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ನಿವಾಸಿ ದೇವೇಂದ್ರ (30) ಎಂದು ಗುರುತಿಸಲಾಗಿದೆ.
ಮೃತ ದೇವೇಂದ್ರ ಶಾಸಕ ಅಜಯ್ ಸಿಂಗ್ ಮನೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ. ಬುಧವಾರ ರಾತ್ರಿ ದೇವೇಂದ್ರ ಶಾಸಕರ ಮನೆ ಆವರಣದಲ್ಲಿ ಸಾವಿಗೆ ಶರಣಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಲಬುರಗಿ ಬ್ರಹ್ಮಪುರ ಠಾಣೆ ಪೊಲೀಸರು, ಜೊತೆಗೆ ಬೆರಳಚ್ಚು ತಜ್ಞರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದೇವೇಂದ್ರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರ ಮನೆಯ ಆವರಣದಲ್ಲಿ ವ್ಯಕ್ತಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಾಹಿತಿ ದೊರೆತ ತಕ್ಷಣ ಬ್ರಹ್ಮಪುರ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದರು.