ಕಲಬುರಗಿ: ಆಟವಾಡುತ್ತಾ ಮನೆಯ ಮುಂದಿನ ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ನಗರದ ಹಾಗರಗಾ ಪ್ರದೇಶದ ಮುಜಾಹಿರ್ ಬಡಾವಣೆಯಲ್ಲಿ ನಡೆದಿದೆ. ಅಬ್ದುಲ್ ರಹಿಮಾನ್ (2) ಮೃತ ಕಂದಮ್ಮ. ಮಗು ಆಟ ಆಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೆತ್ತ ಕರುಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಧಿಕಾರಿಗಳ ವಿರುದ್ಧ ಆಕ್ರೋಶ:ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಬಡಾವಣೆಯಲ್ಲಿ ಸಮರ್ಪಕ ರಸ್ತೆ, ಚರಂಡಿ ಇಲ್ಲದೇ ಎಲ್ಲೆಂದರಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ಪದೇ ಪದೆ ಇಂತಹ ಅವಘಡಗಳು ಸಂಭವಿಸುತ್ತಿವೆ. ಈಗ ಮಗು ಚರಂಡಿ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಇದಕ್ಕೆ ಯಾರು ಹೊಣೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 ವರ್ಷದ ಮಗು ಮೇಲೆ ಅತ್ಯಾಚಾರ ಆರೋಪ:ಆರು ವರ್ಷದ ಅಪ್ರಾಪ್ತೆ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನುಷ ಘಟನೆ ವರದಿಯಾಗಿದೆ. ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಕೆರಳಿದ ಜನರು ಆಳಂದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಶ್ರೀರಾಮ ಮಾರ್ಕೆಟ್, ಬಸ್ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಜನರು ಸ್ವಯಂ ಪೇರಿತರಾಗಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು. ಇದರಿಂದ ಆಳಂದ ಪಟ್ಟಣದಲ್ಲಿ ಶುಕ್ರವಾರ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಮಾಹಿತಿ ತಿಳಿದ ಎಸ್ಪಿ ಇಶಾ ಪಂತ್ ಆಳಂದ ಪಟ್ಟಣಕ್ಕೆ ದೌಡಾಯಿಸಿ ಜನರ ಮನವೊಲಿಸಿ ವಾತಾವರಣ ತಿಳಿಗೊಳಿಸಿದರು. ಡಿವೈಎಸ್ಪಿ, ಸಿಪಿಐಗಳು ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಕೀಯ ವೈಷಮ್ಯ-ವ್ಯಕ್ತಿ ಮೇಲೆ ಹಲ್ಲೆ ಆರೋಪ: ರಾಜಕೀಯ ವೈಷಮ್ಯದ ಹಿನ್ನೆಲೆ ಗುಂಪು ಕಟ್ಟಕೊಂಡು ಬಂದು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಜಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪರಮೇಶ್ವರ ಪೂಜಾರ ಎಂಬುವವರ ಮೇಲೆ ಹಲ್ಲೆಯಾಗಿದ್ದು, ತಲೆಗೆ ಗಾಯವಾಗಿದೆ.