ಕಲಬುರಗಿ: ಮೋಜಿಗಾಗಿ ಸುಲಿಗೆ, ಕಳ್ಳತನ ಮಾಡುತ್ತಿದ್ದ 6 ಜನ ಮತ್ತು ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಸೇರಿದಂತೆ 8 ಮಂದಿ ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. 13 ಬೈಕ್ ಸೇರಿದಂತೆ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಶಹಾಬಜಾರದ ದೀಪಕ್ ರಾಠೋಡ್ (22), ಹುಬ್ಬಳ್ಳಿಯ ಆನಂದ ನಗರ 1ನೇ ಕ್ರಾಸ್‍ನ ಸಮೀರ್ ಅಹ್ಮದ್ (21) ಮತ್ತು ಫಿಲ್ಟರ್ ಬೆಡ್ ಆಶ್ರಯ ಕಾಲೋನಿಯ ಶಶಿ ರಾಠೋಡ್ ಬಂಧಿತರು. ಇವರಿಂದ 40 ಗ್ರಾಂ ಚಿನ್ನಾಭರಣ, 25 ಸಾವಿರ ನಗದು, ಒಂದು ಸಿಲ್ವರ್ ಕಲರ್ ಹೀರೋ ಸ್ಪ್ಲೆಂಡರ್ ಬೈಕ್ ಹಾಗು 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಇತ್ತೀಚೆಗೆ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖ್ ರೋಜಾ ಏರಿಯಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಜಾತಾ ಬಿರಾದಾರ ಎಂಬವರ ಕೊರಳಲ್ಲಿದ್ದ 10 ಗ್ರಾಂ ಬಂಗಾರದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದರು. ಅಲ್ಲದೇ, 1 ಸುಲಿಗೆ ಮತ್ತು 4 ಮನೆ ಕಳ್ಳತನ ಸೇರಿದಂತೆ 5 ಅಪರಾಧ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಮೂವರು ಮನೆಗಳ್ಳರನ್ನು ಬಂಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಇವರು, ಇತ್ತೀಚಿಗೆ ನಗರದ ರಿಂಗ್ ರಸ್ತೆ ಸ್ವಾರಗೇಟ್ ಬಳಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಸಾವಳಗಿ ಗ್ರಾಮದ ಶೀಲವಂತ ಅಲಿಯಾಸ್ ಶಿವ್ಯಾ ಕಾಳೆ ( 23), ಗಣೇಶ ಪವಾರ (25) ಮತ್ತು ತಾಜ ಸುಲ್ತಾನಪುರದ ರಘು ಅಲಿಯಾಸ್ ರಗಲ್ಯಾ ಪವಾರ ( 26) ಬಂಧಿತ ಆರೋಪಿಗಳು.