ಕಲಬುರಗಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬದ ದಿನದಂದೇ, ಹಳೆ ದ್ವೇಷಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ಉಂಟಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಒಂದೇ ಸಮುದಾಯಕ್ಕೆ ಸೇರಿದ ಹೊನಗುಂಟಾ ಮತ್ತು ಗೋಟಾಳ್ ಕುಟುಂಬಗಳು ಹಳೆ ವೈಷಮ್ಯದ ಹಿನ್ನೆಲೆ ಪರಸ್ಪರ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೇಮ ವಿವಾಹಕ್ಕೆ ಸಂಬಂಧಿಸಿ ಈ ಎರಡು ಕುಟುಂಬದ ಮಧ್ಯೆ ಕಳೆದ ಹಲವು ವರ್ಷಗಳಿಂದ ದ್ವೇಷವಿತ್ತು. ಮೊಹರಂ ಹಬ್ಬ ಆಚರಣೆ ಮೆರವಣಿಗೆ ನೋಡಲೆಂದು ವಿವಿಧ ಗ್ರಾಮಗಳಿಂದ ಇಂಗಳಗಿ ಗ್ರಾಮಕ್ಕೆ ಬಂದಿದ್ದ ಜನರು, ಕಲ್ಲು ತೂರಾಟದಿಂದ ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಈ ಕುರಿತಾಗಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದು, ಸದ್ಯ ಗ್ರಾಮದಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿದೆ.
ಮೊಹರಂ ಹಬ್ಬದ ನಿಮಿತ್ತ ಶಿಯಾ ಸಮುದಾಯದಿಂದ ಮಾತಂ ಮೆರವಣಿಗೆ:ಶನಿವಾರ ಮೊಹರಂ ಹಬ್ಬವನ್ನು ಜಿಲ್ಲೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಮೊಹರಂ ನಿಮಿತ್ತ ಶಿಯಾ ಸಮುದಾಯದವರು ಮಾತಂ ಮೆರವಣಿಗೆ ಮಾಡಿದರು. ತಾರಫೈಲ್ ಬಡಾವಣೆಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ಶಿಯಾ ಸಮುದಾಯದ ನೂರಾರು ಪುರುಷರು ಹಾಗೂ ಮಹಿಳೆಯರು ಸೇರಿ ಅನೇಕರು ತಮ್ಮ ದೇಹ ದಂಡಿಸಿಕೊಂಡು ಮೆರವಣಿಗೆ ಮಾಡಿದರು.