ಕರ್ನಾಟಕ

karnataka

ETV Bharat / state

ಕೊಟ್ಟ ಸಾಲ ವಾಪಸ್ ಕೇಳಿದ ತಾಯಿ-ಮಗನನ್ನು ಸಿನಿಮಾ ಶೈಲಿಯಲ್ಲಿ ಕಿಡ್ನಾಪ್ ಮಾಡಿಸಿದ ಮಹಿಳೆ! - ಸಿನಿಮಾ ಸ್ಟೈಲ್​ನಲ್ಲಿ ಕಿಡ್ನಾಪ್

ಕೊಟ್ಟ ಸಾಲ ಮರಳಿಸುವಂತೆ ಕೇಳಿದ್ದಕ್ಕೆ ಮಹಿಳೆಯೊಬ್ಬಳು ತಾಯಿ ಮತ್ತು ಮಗನನ್ನು ಸಿನಿಮಾ ಶೈಲಿಯಲ್ಲಿ ಕಿಡ್ನಾಪ್ ಮಾಡಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

kalaburagi kidnap case
kalaburagi kidnap case

By

Published : Jun 27, 2023, 6:36 PM IST

Updated : Jun 27, 2023, 7:02 PM IST

ಕಲಬುರಗಿ ಕಿಡ್ನಾಪ್‌ ಪ್ರಕರಣ- ಆರೋಪಿ ಮಹಿಳೆ ಸೆರೆ

ಕಲಬುರಗಿ : ಕೊಟ್ಟ ಹಣ ವಾಪಸ್ ಕೇಳಲು ತಾಯಿ ಮತ್ತು ಮಗ ಮಹಿಳೆಯೊಬ್ಬರ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ತಾಯಿ ಹಾಗು ಮಗನಿಂದ ಎಸ್ಕೇಪ್ ಆಗಲು ಹಣ ಪಡೆದಾಕೆ ಸಂಚು ರೂಪಿಸಿ ಥೇಟ್ ಸಿನಿಮಾ ಶೈಲಿಯಲ್ಲಿ ಪ್ಲ್ಯಾನ್ ಮಾಡಿದ್ದಾಳೆ. ಹಣಕ್ಕಾಗಿ ಪೀಡಿಸ್ತಿದ್ದಾರೆ ಅಂತಾ ತನ್ನ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಇದರ ಬೆನ್ನಲ್ಲೇ ಎಂಟ್ರಿ ಕೊಟ್ಟ ಆಕೆಯ ಸ್ನೇಹಿತರು ತಾವು ಪೊಲೀಸ್ ಅಧಿಕಾರಿಗಳೆಂದು ಹೇಳಿದ್ದಾರೆ. ಸ್ನೇಹಿತೆಯನ್ನು ಬಚಾವ್ ಮಾಡೋದಕ್ಕೆ ಮುಂದಾಗಿ ಹಣ ಕೇಳಬಂದ ತಾಯಿ ಮತ್ತು ಮಗನನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ. ಆದ್ರೆ ಕಿಡ್ನಾಪರ್ಸ್ ಎಸ್ಕೇಪ್ ಆಗುವಾಗಲೇ ಸಿನಿಮೀಯ ರೀತಿಯಲ್ಲಿ ಎಂಟ್ರಿ ಕೊಟ್ಟ ಮತ್ತೊಬ್ಬ ವ್ಯಕ್ತಿ ಕಿಡ್ನಾಪರ್ಸ್ ಕೈಯಿಂದ ಇಬ್ಬರನ್ನು ಬಚಾವ್ ಮಾಡಿದ್ದಾನೆ. ಅರೆರೆ! ಏನಿದು ಸ್ಟೋರಿ ಅಂತೀರಾ. ಕಂಪ್ಲೀಟ್‌ ಮಾಹಿತಿ ಓದಿ.

ಕಿಡ್ನ್ಯಾಪ್ ಮಾಡಿಸಿದ ಮಹಿಳೆ ಮಂಗಳಾ

ಪೊಲೀಸರಿಂದ ಮಾಹಿತಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೌಡಗಾಂವ್ ಗ್ರಾಮದ ನಿವಾಸಿ ಮಂಗಳಾ. ಕಲಬುರಗಿ ತಾಲ್ಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್​ಡಿಎ ಆಗಿ ಇವರು ಕೆಲಸ ಮಾಡುತ್ತಿದ್ದರು. ಅಫಜಲಪುರದಿಂದ ಬಂದು ಹೋಗೋದಕ್ಕೆ ಆಗಲ್ಲ ಎಂದು ಕಲಬುರಗಿ ನಗರದ ಶೆಟ್ಟಿ ಥಿಯೇಟರ್ ಬಳಿ ಸಾವಿತ್ರಿ ಎಂಬವರ ಬಾಡಿಗೆ ಮನೆಯಲ್ಲಿ ಗಂಡನೊಂದಿಗೆ ವಾಸವಿದ್ದರು.

ಮಂಗಳಾ ಗಂಡ ಮಹೇಶ್ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಬೇರೆಯವರಿಂದ ಹಣ ಪಡೆದು ಒಂದಕ್ಕೆ ಎರಡರಷ್ಟು ಹಣ ಡಬಲ್ ಮಾಡಿಕೊಡೋದಾಗಿ ನಂಬಿಸಿದ್ದಾರೆ. ಅಷ್ಟೇ ಅಲ್ಲ, ಸಾಕಷ್ಟು ಜನರ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಆರಂಭದಲ್ಲಿ ಅಲ್ಪಸ್ವಲ್ಪ ಪಡೆದ ಹಣಕ್ಕೆ ಇಂತಿಷ್ಟು ಬಡ್ಡಿ ಅಂತಾ ಕೈಗಿತ್ತು ಎಲ್ಲರ ನಂಬಿಕೆ ಗಳಿಸಿದ್ದರು. ಆ ಬಳಿಕ ಎಲ್ಲರ ಬಳಿಯಿಂದಲೂ ದೊಡ್ಡ ಮೊತ್ತದ ಹಣ ಪಡೆಯಲು ಮುಂದಾಗಿದ್ದರು.

ಆರೋಪಿ ನಬಿಸಾಬ್ ದಸ್ತಗೀರ್ ಶೇಖ ಕಾರಭೋಸಗಾ

ಅದರಂತೆ, ಮಂಗಳಾ ಮೂಲಕ ತನ್ನ ಮನೆ ಮಾಲೀಕರಾದ ಸಾವಿತ್ರಿ ಬಳಿಯಿಂದ ಕೂಡ 31 ಲಕ್ಷ ರೂ ಹಣ ಪಡೆದುಕೊಂಡಿದ್ದರು. ಆದ್ರೆ ಹಣ ಪಡೆದು ವರುಷಗಳೇ ಕಳೆದ್ರೂ ವಾಪಸ್ ಕೊಟ್ಟಿರಲಿಲ್ಲ. ಹಾಗಾಗಿ ಹಣ ವಾಪಸ್ ಕೇಳಲೆಂದು ನಿನ್ನೆ (ಸೋಮವಾರ) ಸಾವಿತ್ರಿ ಮತ್ತು ಆಕೆಯ ಮಗ ಮಾಣಿಕಪ್ಪ ಇಬ್ಬರೂ ಶ್ರೀನಿವಾಸ್ ಸರಡಗಿಯ ಶಾಲೆಗೆ ತೆರಳಿ ಮಂಗಳಾ ಅವರಿಂದ ಹಣ ಕೇಳಿದ್ದಾರೆ. ಈ ಸಂದರ್ಭದಲ್ಲಿ ಇವರ ಕೈಯಿಂದ ಹೇಗಾದ್ರೂ ಮಾಡಿ ಬಚಾವ್ ಆಗಬೇಕೆಂದು ಪ್ಲ್ಯಾನ್ ಮಾಡಿದ ಮಂಗಳಾ, ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ದಯಾನಂದ್ ಹೂಗಾರ

ತಕ್ಷಣ ಸ್ಥಳಕ್ಕೆ ಬಂದ ಮಂಗಳಾ ಸ್ನೇಹಿತರಾದ ದಯಾನಂದ್, ರಾಜಕುಮಾರ್ ಇಬ್ಬರೂ ತಾವು ಕೋಲಾರದ ಪಿಎಸ್​ಐಗಳೆಂದು ಹೇಳಿ ವಾರಂಟ್ ಮೇಲೆ ಮಂಗಳಾರನ್ನು ವಿಚಾರಣೆ ಮಾಡಬೇಕಾಗಿದೆ ಅಂತಾ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆಗ ನನ್ನ ಹಣ ಕೊಟ್ಟ ಮೇಲೆ ಎಲ್ಲಿಗಾದ್ರೂ ಕರೆದುಕೊಂಡು ಹೋಗಿ ಎಂದು ಹೇಳಿದಕ್ಕೆ ಕಮಿಷನರ್ ಕಚೇರಿಗೆ ಹೋಗ್ತಿರುವುದಾಗಿ ಹೇಳಿದ್ದಾರೆ. ಸಾವಿತ್ರಿ ಆಕೆಯ ಮಗನನ್ನು ಕೂಡ ಎರಡೂ ಕಾರ್​ನಲ್ಲಿ ಪ್ರತ್ಯೇಕವಾಗಿ ಕೂರಿಸಿಕೊಂಡಿದ್ದಾರೆ. ಕಮಿಷನರ್ ಕಚೇರಿಗೆ ಹೋಗಬೇಕಿದ್ದ ಕಾರು ಹೈಕೋರ್ಟ್ ಕಡೆ ಹೋಗ್ತಿದ್ದಂತೆ ಅನುಮಾನ ಬಂದು ಸಾವಿತ್ರಿ ಮಗ ಮಾಣಿಕಪ್ಪ ತನ್ನ ಸಹೋದರನಿಗೆ ವಿಷಯ ತಿಳಿಸಿದ್ದಾನೆ. ಹೈಕೋರ್ಟ್ ಹತ್ತಿರ ಕಿಡ್ನಾಪರ್ಸ್ ಕಾರ್ ಬರ್ತಿದ್ದ ಹಾಗೆ ಕಾರ್ ಮುಂದೆ ಬೈಕ್ ಅಡ್ಡಗಟ್ಟಿ ತಾಯಿ ಮಗನನ್ನು ಸೇಫ್ ಮಾಡೋದಕ್ಕೆ ಮುಂದಾಗಿದ್ದಾನೆ.

ಆರೋಪಿ ರಾಜಶೇಖರ

ಇನ್ನು ಹೈಕೋರ್ಟ್ ಬಳಿ ಸಾವಿತ್ರಿಯ ಮತ್ತೊಬ್ಬ ಮಗ ರೇವಣಸಿದ್ದಪ್ಪ ಕಾರ್ ಮುಂದೆ ಬೈಕ್ ಅಡ್ಡಗಟ್ಟಿ ತಾಯಿ ಮತ್ತು ಸಹೋದರನ ರಕ್ಷಣೆಗೆ ಮುಂದಾದಾಗ ಮೊದಲೇ ಕೋಲಾರದ ಪಿಎಸ್​ಐ ಅಂತಾ ಹೇಳಿದ್ದ ರಾಜಕುಮಾರ್ ತನ್ನ ಬಳಿಯಿದ್ದ ಲೈಸೆನ್ಸ್ ಗನ್ ತೆಗೆದು ತೋರಿಸಿ ಹೆದರಿಸಲು ಮುಂದಾಗಿದ್ದಾನೆ. ತಕ್ಷಣ ರೇವಣಸಿದ್ದಪ್ಪ ತನ್ನ ತಾಯಿ ತಂಗಿಯನ್ನು ಕಿಡ್ನಾಪ್ ಮಾಡೋದಕ್ಕೆ ಮುಂದಾಗಿದ್ದಾರೆಂದು ಕಿರುಚಾಡಿದ್ದಾರೆ. ಅಕ್ಕಪಕ್ಕದಲ್ಲಿದ್ದ ಜನರು ಸೇರಿಕೊಂಡು ವಿಚಾರಿಸಿದ್ದಾರೆ. ಜನ ಸೇರಿರುವ ಮಾಹಿತಿ ತಿಳಿಯುತ್ತಿದ್ದಂತೆ ಹೈಕೋರ್ಟ್ ಬಳಿಯಿದ್ದ ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದ್ದಾರೆ. ರಾಜಕುಮಾರ್ ಬಳಿಯಿದ್ದ ಗನ್ ಕಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಶೋಕ ನಗರ ಪೊಲೀಸರು ಮಂಗಳಾ, ದಯಾನಂದ್, ರಾಜಕುಮಾರ್ ಮತ್ತು ನಬೀಸಾಬ್ ಎಂಬವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಆರೋಪಿ ದಂಪತಿಗೆ ಜೈಲು : ಮಂಗಳಾ ಮತ್ತು ಗ್ಯಾಂಗ್ ಹಣ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗ್ತಿರುವ ವಿಚಾರವನ್ನು ಸಾವಿತ್ರಿಬಾಯಿ ಹೇಳಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ವ್ಯಾಪ್ತಿಯಿಂದ ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿವಿ ಠಾಣೆಗೆ ಒಪ್ಪಿಸಿ ನಾಲ್ವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿಡ್ನಾಪ್ ಮಾಡಿದ ನಾಲ್ಕು ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳಾ ಗಂಡ ಮಹೇಶ್ ಕಲಬುರಗಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜನರ ಬಳಿ ಹಣ ಡಬಲ್ ಮಾಡಿ ಕೊಡುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚಿಸಿದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದಾನೆ. ಮಂಗಳಾ ಮತ್ತು ತಂಡ ಕೂಡ ಜೈಲು ಸೇರಿಕೊಂಡಿದೆ.

ಮಂಗಳಾ ಗ್ಯಾಂಗ್‌ನಲ್ಲಿದ್ದ ಮತ್ತೊಬ್ಬ ಆರೋಪಿ ಹೈಕೋರ್ಟ್ ಬಳಿ ಗಲಾಟೆ ಆಗ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಹೀಗೆ ಎಸ್ಕೇಪ್ ಆದವನು ಸದ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿರೋದಾಗಿ ಮಾಹಿತಿ ಕಲೆ ಹಾಕಿದ್ದಾರೆ. ಆದ್ರೆ ಆತ ಯಾರು, ಏನು ಅಂತಾ ಈ ನಾಲ್ವರು ಆರೋಪಿಗಳ ವಿಚಾರಣೆಯ ಬಳಿಕವಷ್ಟೆ ತಿಳಿಯಬೇಕಾಗಿದೆ. ಕೃತ್ಯಕ್ಕೆ ಬಳಸಿದ ಎರಡು ಕಾರು, ಗನ್ ಮತ್ತು 18 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಕರ್ತವ್ಯ ಲೋಪ ಆರೋಪದಡಿ ಅಶೋಕನಗರ ಠಾಣೆಯ ಇನ್ಸ್​​​​ಪೆಕ್ಟರ್​​​ ಅಮಾನತು

Last Updated : Jun 27, 2023, 7:02 PM IST

ABOUT THE AUTHOR

...view details