ಕಲಬುರಗಿ: ಕೆ ಇ ಎ ಅಕ್ರಮದ ರೂವಾರಿ ಆರ್ ಡಿ ಪಾಟೀಲ್ ಅಪಾರ್ಟ್‌ಮೆಂಟ್ ನಿಂದ ತಪ್ಪಿಸಿಕೊಂಡ ಹಿನ್ನೆಲೆ, ಕರ್ತವ್ಯ ನಿರ್ಲಕ್ಷ್ಯ ಆರೋಪದ ಅಡಿ ಸಿಪಿಐ ಪಂಡಿತ ಸಗರ ಅವರನ್ನು ಅಮಾನತು ಮಾಡಿ ಕಲಬುರಗಿ ಐಜಿಪಿ ಅಜಯ್ ಹಿಲೋರಿ ಆದೇಶ ಹೊರಡಿಸಿದ್ದಾರೆ. ವರ್ಧಾ ಅಪಾರ್ಟ್ಮೆಂಟ್ನಲ್ಲಿರುವ ಮಾಹಿತಿ ಸಿಕ್ಕರು ಬಂಧನಕ್ಕೆ ತೆರಳಲು ತಡ ಮಾಡಲಾಗಿದೆ ಎಂದು ಆರೋಪ ಇದೆ.
ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ಆರ್ ಡಿ ಪಾಟೀಲ್ ವಸತಿ ಸಮುಚ್ಚಯದಿಂದ ನ.7ರಂದು ಪರಾರಿಯಾಗಿದ್ದ. ಆತ ಕಾಂಪೌಂಡ್ ಹಾರಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್ನಿಂದ ಆರ್ ಡಿ ಪಾಟೀಲ್ ಎಸ್ಕೇಪ್ ಆಗಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸರ ಹುಡುಕಾಟದ ನಡುವೆ ಈತ ಕಲಬುರಗಿಯಲ್ಲಿಯೇ ಇದ್ದ. ಇದೇ ಫ್ಲ್ಯಾಟ್ನಲ್ಲಿರುವ ಕುರಿತು ಜಿಲ್ಲಾ ಪೊಲೀಸರಿಗೆ ಖಚಿತ ಮಾಹಿತಿಯೂ ಸಿಕ್ಕಿತ್ತು. ಆದರೆ, ಹೋಗುವ ಮುನ್ನವೇ ಎಸ್ಕೇಪ್ ಆಗಿದ್ದ. ಅಪಾರ್ಟ್ಮೆಂಟ್ನ ಹಿಂಬದಿಯ ಕಾಂಪೌಂಡ್ಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಹಾರಿ ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.