ಕಲಬುರಗಿ: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಅದೆಷ್ಟೋ ಮಂದಿಯ ಕೈಯಲ್ಲಿ ಕೆಲಸವಿಲ್ಲದೆ, ಬದುಕು ಬೀದಿಗೆ ಬಂದು ನಿಂತಿದೆ. ಅದರಲ್ಲೂ ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿದ್ದ ಚಾಲಕರು ತಮ್ಮ ಜೀವನ ನಿರ್ವಹಣೆಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಜೀವನೋಪಾಯಕ್ಕೆ ದಾರಿಯಾಗಿದ್ದ ಟ್ಯಾಕ್ಸಿಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಕೋವಿಡ್ ಲಾಕ್‌ಡೌನ್ ಹೊಡೆತಕ್ಕೆ ಟ್ಯಾಕ್ಸಿ ಚಾಲಕರು ಕಂಗಾಲು! ಕಲಬುರಗಿ ನಗರದಲ್ಲಿ ಸುಮಾರು 250 ಟ್ಯಾಕ್ಸಿ ಚಾಲಕರ ಕುಟುಂಬಗಳಿವೆ. ಕೊರೊನಾ ಕರ್ಫ್ಯೂ ಹಾಗೂ ನಂತರದ ಲಾಕ್ಡೌನ್ನಿಂದ ವಾಹನಗಳ ಓಡಾಟ ನಿಷೇಧಿಸಲಾಗಿದ್ದು, ಟ್ಯಾಕ್ಸಿ ವಾಹನಗಳು ಮನೆ ಮುಂದೆ ನಿಂತಿವೆ. ಇದರಿಂದಾಗಿ ಟ್ಯಾಕ್ಸಿ ವಾಹನಗಳನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಚಾಲಕರ ಕುಟುಂಬಗಳೀಗ ಬೀದಿಗೆ ಬಂದು ನಿಂತಿವೆ.
ಕಳೆದ ಸುಮಾರು ವರ್ಷಗಳಿಂದ ಟ್ಯಾಕ್ಸಿ ವಾಹನ ನಡೆಸಿಕೊಂಡೇ ಜೀವನ ಸಾಗಿಸುತ್ತಿರುವ ಚಾಲಕರು ಈಗ ಕೈಯಲ್ಲಿ ಕೆಲಸವಿಲ್ಲದೇ, ದುಡಿಮೆ-ಕಾಸು ಇಲ್ಲದೇ ಮನೆ ಬಾಡಿಗೆ ಕಟ್ಟಲೂ ಕೂಡ ಪರದಾಡುತ್ತಿದ್ದಾರೆ. ಮನೆಗೆ ಸಿಲಿಂಡರ್ ತರಲು ಆಗ್ತಿಲ್ಲ, ದಿನಸಿ ತರಲು ಕೈಯಲ್ಲಿ ಹಣವಿಲ್ಲ, ಸಾಲ ಮಾಡಬೇಕು ಅಂದರೆ ಸಾಲ ಕೂಡ ಸಿಗ್ತಿಲ್ಲ, ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಕರೆದೊಯ್ಯಲೂ ಸಹ ಹಣವಿಲ್ಲದೆ ಜೀವ ಕಳೆದುಕೊಳ್ಳುವ ಆತಂಕದಲ್ಲೇ ಚಾಲಕರ ಕುಟುಂಬಗಳು ದಿನ ಕಳೆಯುತ್ತಿವೆ.
ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಮೂರು ತಿಂಗಳುಗಳ ಕಾಲ ಟ್ಯಾಕ್ಸಿಗಳು ಮನೆ ಮುಂದೆ ನಿಂತಿದ್ದವು. ನಂತರ ಅನ್ಲಾಕ್ ಆದ ಮೇಲೆ ಡೀಸೆಲ್, ಪೆಟ್ರೋಲ್ ಬೆಲೆ ಗಣನೀಯವಾಗಿ ಏರಿಕೆ ಕಂಡಿತ್ತು. ಆದರೆ ವಾಹನಗಳ ಬಾಡಿಗೆ ಬೆಲೆ ಮಾತ್ರ ಏರಿಕೆ ಆಗಲಿಲ್ಲ. ಇದರಿಂದಾಗಿ ಗಳಿಕೆ ಕಡಿಮೆಯಾಗಿತ್ತು. ಹೇಗೋ ಕಡಿಮೆ ಗಳಿಕೆಯಲ್ಲಾದ್ರೂ ಕುಂಟುತ್ತಾ ಜೀವನ ಸಾಗುತ್ತಿತ್ತು. ಈಗ ಮತ್ತೆ ಲಾಕ್‌ಡೌನ್ ಪರಿಣಾಮ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪೊಲೀಸರು ಗಾಡಿಗಳನ್ನು ಸೀಜ್ ಮಾಡುತ್ತಿದ್ದಾರೆ. ಬಾಡಿಗೆ ಮೇಲೆಯೇ ಅವಲಂಬಿತರಾದ ಚಾಲಕರ ಕುಟುಂಬಗಳು ಈಗ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ.
ಇದನ್ನೂ ಓದಿ:ಕೊರೊನಾ ಲಾಕ್‌ಡೌನ್: ಸಂಕಷ್ಟ ಹೇಳಿಕೊಂಡ ಹಾಸನದ ಆಟೋ ಚಾಲಕರು
ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಬ್ಯಾಂಕ್ ಸಾಲ ಮರಳಿಸಲು ಆಗದೆ ಹಲವರು ಜೀವನೋಪಾಯಕ್ಕೆ ದಾರಿದೀಪವಾಗಿದ್ದ ಗಾಡಿಗಳನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಕೂಡ ಇಎಂಐ, ಇನ್ಸೂರೆನ್ಸ್ ಕಟ್ಟಲು ಆಗದೆ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಬಾರಿ ಪಾಸ್ ವ್ಯವಸ್ಥೆಯಾದರೂ ಇತ್ತು. ಈ ಬಾರಿ ಅದೂ ಕೂಡ ಮಾಡಿಲ್ಲ. ಕಳೆದ ಬಾರಿ ಬ್ಯಾಂಕಿನವರು ಇಎಂಐ ವಿನಾಯತಿ ನೀಡುವಂತೆ ಸರ್ಕಾರ ಸೂಚಿಸಿತ್ತು. ಈ ಬಾರಿ ಅದನ್ನೂ ಸರ್ಕಾರ ಮಾಡಿಲ್ಲ. ಹೀಗಾಗಿ ಫೈನಾನ್ಸ್ನವರು ಅಸಲು, ಬಡ್ಡಿಗಾಗಿ ಪೀಡಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಏನಾದ್ರೂ ಕ್ರಮಕ್ಕೆ ಮುಂದಾಗಬೇಕು ಅನ್ನೋದು ಚಾಲಕರ ಒತ್ತಾಯವಾಗಿದೆ.