ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋವಿಡ್ -19 ಸುರಕ್ಷಾ ಚಕ್ರ ಎಂಬ ಸಹಾಯವಾಣಿ ಕೇಂದ್ರ ತೆರೆದಿದೆ.
ನಗರದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಇಂದು ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ಸಿ. ರೇವೂರ್ ಅವರು ಸುರಕ್ಷಾ ಚಕ್ರ ಸಹಾಯವಾಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತ ರೋಗಿಗಳಿಗೆ ಆ್ಯಂಬ್ಯುಲೆನ್ಸ್, ಆಸ್ಪತ್ರೆಗೆ ದಾಖಲಿಸುವುದು, ಆಸ್ಪತ್ರೆಗಳಲ್ಲಿನ ಬೆಡ್‍ಗಳ ಬಗ್ಗೆ ಮಾಹಿತಿ, ಪ್ರಯೋಗಾಲಯದಲ್ಲಿ ಪರೀಕ್ಷೆ ಸೇರಿದಂತೆ ಕೋವಿಡ್ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಕಲಬುರಗಿ ಜಿಲ್ಲೆಯ ಜನರು ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.