ಕಲಬುರಗಿ:ಸಾಕಷ್ಟು ವಿವಾದ ಸೃಷ್ಟಿಸಿದ್ದ ಆಳಂದ ಪಟ್ಟಣದ ದರ್ಗಾದಲ್ಲಿರುವ ಶಿವಲಿಂಗಕ್ಕೆ ಶಿವರಾತ್ರಿ ದಿನದಂದು ಪೂಜೆ ಸಲ್ಲಿಸಲು ಕಲಬುರಗಿ ವಕ್ಫ್ ಟ್ರಿಬುನಲ್ ನ್ಯಾಯಾಲಯ ಅನುಮತಿ ನೀಡಿದೆ. ಶಿವರಾತ್ರಿ ದಿನದಂದೇ ದರ್ಗಾ ಸಂದಲ್ ಇರುವ ಕಾರಣ ಹಿಂದೂ ಹಾಗೂ ಮುಸ್ಲಿಂ ಎರಡು ಸಮುದಾಯಕ್ಕೆ ಪ್ರತ್ಯೇಕವಾದ ಸಮಯ ನಿಗದಿಪಡಿಸಿ ನ್ಯಾಯಾಲಯ ಪೂಜೆಗೆ ಸಮಯವಕಾಶ ಕಲ್ಪಿಸಿಕೊಟ್ಟಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಮುಸ್ಲಿಂ ಸಮುದಾಯಕ್ಕೆ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದರೆ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆವರೆಗೆ ಹಿಂದೂಗಳಿಗೆ ಶಿವನ ಪೂಜೆಗೆ ಅವಕಾಶ ನೀಡಲಾಗಿದೆ. 15 ಜನ ಹಿಂದೂಗಳು ತೆರಳಿ ಪೂಜೆ ಸಲ್ಲಿಸಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ದರ್ಗಾದಲ್ಲಿನ ಪ್ರಾರ್ಥನೆಗೂ 15 ಜನರಿಗಷ್ಟೇ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ಗೆಲುವು, ತಮಿಳುನಾಡಿನಲ್ಲಿ ನಿಕುಂಬಲ ಯಜ್ಞ ನೆರವೇರಿಸಿ ಹರಕೆ ತೀರಿಸಿದ ಹಿಮಾಚಲ ಡಿಸಿಎಂ ಅಗ್ನಿಹೋತ್ರಿ
14ನೇ ಶತಮಾನದಲ್ಲಿ ಲಾಡ್ಲೆ ಮಶಾಕರು ನಡೆದುಹೋದ ಸುಪ್ರಸಿದ್ಧಿ ದರ್ಗಾ ಇದಾಗಿದೆ. ನಂತರದ 15ನೇ ಶತಮಾನದ ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿ, ಸಮಾಧಿ ಮೇಲೆ ಶಿವಲಿಂಗ ಇದೆ. ಇದು ಹಿಂದೂ ಮತ್ತು ಮುಸ್ಲಿಂ ಭಾವಕ್ಯತೆ ತಾಣ ಕೂಡಾ ಹೌದು. ಈ ಹಿನ್ನೆಲೆ ದರ್ಗಾ ಹಾಗೂ ಶಿವಲಿಂಗಕ್ಕೆ ಆಯಾ ಸಮಾಜದವರು ನಿತ್ಯ ಪೂಜೆ ನೆರವೇರಿಸುತ್ತಿದ್ದರು. ಆದರೆ, ಕಳೆದ ವರ್ಷ ಸ್ಥಳದಲ್ಲಿ ಜಾಟಾಪಟಿಯಾಗಿದ್ದರಿಂದ ಸಮಸ್ಯೆ ಉದ್ಭವಿಸಿತ್ತು. ಹಲವು ಬೆಳವಣಿಗೆಗಳ ಬಳಿಕ ಇದಕ್ಕೆ ಆಕ್ಷೇಪಿಸಿದ್ದ ಹಿಂದೂ ಮುಖಂಡರು ಪೂಜೆಗೆ ಪಟ್ಟು ಹಿಡಿದಿದ್ದರಿಂದ ಮಧ್ಯೆ ಪ್ರವೇಶ ಮಾಡಿದ ಜಿಲ್ಲಾಡಳಿತ, 10 ಜನಕ್ಕೆ ಪೂಜೆ ಮಾಡಲು ಅನುಮತಿ ನೀಡಿತ್ತು. ಇದರ ಹೊರತಾಗಿಯೂ ಸ್ಥಳದಲ್ಲಿ ಸಮಸ್ಯೆ ಉದ್ಭವಿಸಿತ್ತು.