ಕಲಬುರಗಿ: ಅನ್ನದಾತ ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆಗಳ ಸುಳಿಗೆ ಸಿಲುಕಿ ಪರದಾಡುತ್ತಾನೆ. ಅತಿವೃಷ್ಟಿ, ಅನಾವೃಷ್ಟಿಗೆ ನಲುಗಿದ ರೈತನಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಸಮಸ್ಯೆ ಎದುರಾಗಿದೆ.
ಹೌದು, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಂವ್ಹಾರ್ ಗ್ರಾಮದಲ್ಲಿ ನ್ಯೂ ಕರ್ನಾಟಕ ಆಗ್ರೋ ಶ್ರೀರಾಮ ಕಂಪನಿಯವರು ಕಳಪೆ ಕ್ರಿಮಿನಾಶಕ ನೀಡಿದ್ದರಿಂದ ನೂರಾರು ಎಕರೆ ಹತ್ತಿ ಬೆಳೆ ನಾಶವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಕಳಪೆ ಕ್ರಿಮಿನಾಶಕದಿಂದ ಹತ್ತಿ ಬೆಳೆ ನಾಶ: ರೈತರ ಆಕ್ರೋಶ ತಮ್ಮದೇ ಗ್ರಾಮದ ಆಗ್ರೋ ಎಜೆನ್ಸಿ ಕಳಪೆ ಕ್ರಿಮಿನಾಶಕ ನೀಡಿ ನಂಬಿದ್ದ ರೈತರ ಕುತ್ತಿಗೆ ಕೊಯುವ ಕೆಲಸ ಮಾಡಿದೆ ಎಂದು ರೈತರು ಕಿಡಿಕಾರಿದ್ದಾರೆ. ಗ್ರಾಮದ ಹತ್ತಾರು ರೈತರು ನೂರಾರು ಎಕರೆಯಲ್ಲಿ ಸಾಲ ಸೂಲ ಮಾಡಿ ಹತ್ತಿ ಬೆಳೆದಿದ್ದರು. ಅತಿವೃಷ್ಟಿ ಅನಾವೃಷ್ಟಿ ನಡುವೆ ಹತ್ತಿ ಚಿಗುರೊಡೆದಾಗ ಮಾಡಿದ ಸಾಲ ತಿರಿಸುವ ನೀರಿಕ್ಷೆಯಲ್ಲಿದ್ದರು. ಆದರೆ, ಹುಳುಗಳಿಂದ ಹತ್ತಿಯನ್ನು ರಕ್ಷಿಸಲು ಔಷಧ ಸಿಂಪಡಿಸಿ ಕೆಲವೇ ದಿನಗಳಲ್ಲಿ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಎಕ್ಕರೆಗೆ 10 -15 ಕ್ವಿಂಟಾಲ್ ಬರಬೇಕಾದ ಇಳುವರು ಮೂರ್ನಾಲು ಕ್ವಿಂಟಲ್ ಸಹ ಬಾರದೇ ರೈತರು ಹೈರಾಣಾಗಿದ್ದಾರೆ.
ಜೇವರ್ಗಿ ತಾಲೂಕಿನ ಹಲವಡೆ ನೂರಾರು ಕ್ರಿಮಿನಾಶಕ ಅಂಗಡಿಗಳು ಅಕ್ರಮವಾಗಿ ತಲೆ ಎತ್ತಿವೆ. ಹಲವು ಔಷಧದ ಅಂಗಡಿಗಳು ಪರವಾನಗಿ ಇಲ್ಲದೇ ನಡೆಸುತ್ತಿವೆ. ಕಳಪೆ ಮಟ್ಟದ ಔಷಧಗಳನ್ನ ರೈತರಿಗೆ ಮಾರಾಟ ಮಾಡಿ ರೈತರು ಸಮಸ್ಯೆಗೆ ಸಿಲುಕುವಂತೆ ಮಾಡಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಳಪೆ ಮಟ್ಟದ ಕ್ರಿಮಿನಾಶಕ ಔಷಧ ಮಾರಾಟ ಮಾಡಿರುವ ಗಂವ್ಹಾರ್ ಗ್ರಾಮದ ನ್ಯೂ ಕರ್ನಾಟಕ ಆಗ್ರೋ ಶ್ರೀರಾಮ ಕಂಪನಿ ಮೇಲೆ ಕಠಿಣ ಕ್ರಮ ಕೈಗೊಂಡು ರೈತರಿಗೆ ಪರಿಹಾರ ದೊರಕಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.