ಕರ್ನಾಟಕ

karnataka

ETV Bharat / state

ಆಡಳಿತದಲ್ಲಿ ತಂತ್ರಜ್ಞಾನ.. ಆಗಸ್ಟ್ 15 ರಿಂದ ಇ ಆಫೀಸ್​ ಮೂಲಕವೇ ಪತ್ರ ವ್ಯವಹಾರ : ಸಚಿವ ಕೃಷ್ಣ ಬೈರೇಗೌಡ - ಈಟಿವಿ ಭಾರತ ಕನ್ನಡ

ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳು ಆಗಸ್ಟ್ 15 ರಿಂದ ಇ ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು ಎಂದು ಸಚಿವ ಕೃಷ್ಣೇ ಬೈರೇಗೌಡ ತಿಳಿಸಿದರು.

ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

By

Published : Jul 31, 2023, 10:57 PM IST

ಕಲಬುರಗಿ:ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಇನ್ಮುಂದೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಗಸ್ಟ್ 15 ರಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಲಬುರಗಿ ಡಿಸಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಒಂದು ಪ್ರಕರಣದಲ್ಲಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಸಂಕೀರ್ಣಕ್ಕೆ ಜಮೀನು ನೀಡಲು ಎರಡು ವರ್ಷ ತೆಗೆದುಕೊಳ್ಳಲಾಗಿದೆ. ಮೊನ್ನೆ ಈ ಕಡತ ಇ-ಆಫೀಸ್ ನಲ್ಲಿ ನನ್ನ ಲಾಗಿನ್​ಗೆ ಬಂದಾಗ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ. ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಲ್ಲಿಂದಲು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತಃ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ ಎಂದರು.

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಮಾತನಾಡಿ, ಇ-ಕಚೇರಿ ಅನುಷ್ಟಾನಕ್ಕೆ ಕೂಡಲೆ ಎಲ್ಲಾ ಜಿಲ್ಲಾಧಿಕಾರಿಗಳು, ಕೆಸ್ವಾನ್ ಸಂಪರ್ಕ ಪಡೆದುಕೊಳ್ಳಬೇಕು ಮತ್ತು ತಹಶೀಲ್ದಾರ್​ ಕಚೇರಿ ಹಂತದಲ್ಲಿಯೂ ಇದನ್ನು ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ನ್ಯಾಯಾಲಯದಲ್ಲಿ ಪ್ರಕರಣ ವಿಲೇವಾರಿ ನಂತರ 15 ದಿನದಲ್ಲಿ ಆದೇಶ ಹೊರಡಿಸಿ

ತಹಶೀಲ್ದಾರ್, ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಬಾಕಿ ಇರುವ ಆಸ್ತಿ, ಜಮೀನು ಪ್ರಕರಣಗಳು ವಿಚಾರಣೆ ಅಂತ್ಯವಾಗಿ ಪ್ರಕರಣ ವಿಲೇವಾರಿ ಮಾಡಿದ‌ ನಂತರ ನ್ಯಾಯಾಲಯದ ಆದೇಶ ಹೊರಡಿಸಲು ಬಹಳಷ್ಟು ದಿನದಿಂದ ಬಾಕಿ‌ ಇರುವುದನ್ನು ಗಮನಿಸಲಾಗಿದೆ. ವಿಚಾರಣೆ ಅಂತ್ಯವಾದಲ್ಲಿ ಮುಂದಿನ‌ 15 ದಿನದಲ್ಲಿ ಕಂದಾಯ ನ್ಯಾಯಾಲಯದ ಆದೇಶ‌ ಹೊರಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರ್​ ಮತ್ತು ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದರು.

ಆದೇಶ ಬಾಕಿ ಉಳಿಸಿಕೊಂಡಲ್ಲಿ ಮತ್ತೆ ಸಾರ್ವಜನಿಕರು ಕಚೇರಿಗೆ ತಿರುಗಾಡಬೇಕಿದೆ. ಇದು ಅನಗತ್ಯ ಕಿರಿಕಿರಿಗೆ ಅವಕಾಶ ಮಾಡಿಕೊಡುತ್ತದೆ. ಇದನ್ನು ತಪ್ಪಿಸಬೇಕು.‌ ಕಲಬುರಗಿ ವಿಭಾಗದಲ್ಲಿ ತಹಶೀಲ್ದಾರರ ಹಂತದಲ್ಲಿ 6 ತಿಂಗಳಿನಿಂದ 5 ವರ್ಷ ಮೇಲ್ಪಟ್ಟ 3,307 ಪ್ರಕರಣಗಳು ಬಾಕಿ ಇವೆ. ಕಲಂ‌ 6 ರಿಂದ‌ 10ರ ವರೆಗಿನ ಪ್ರಕರಣಗಳನ್ನು ತಹಶೀಲ್ದಾರರು ಆಂದೋಲನ ರೂಪದಲ್ಲಿ ಮುಂದಿನ 1 ತಿಂಗಳಿನಲ್ಲಿ ವಿಲೇವಾರಿಗೊಳಿಸಿ ಭೂಮಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಅದೇ‌ ರೀತಿ ಸಹಾಯಕ ಆಯುಕ್ತರು ತಮ್ಮ ಹಂತದಲ್ಲಿನ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಹಶೀಲ್ದಾರ ಕಚೇರಿಯಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುವ ಬಗ್ಗೆ ವಿಚಾರಿಸಿದಾಗ, ಗುರುಮಟಕಲ್ ತಹಶೀಲ್ದಾರ್​ ಮಾತನಾಡಿ, 2013 ರಿಂದ ಸುಮಾರು 85 ಪ್ರಕರಣಗಳ ಕಡತ ಕಚೇರಿಯಲ್ಲಿ ಲಭ್ಯ ಇಲ್ಲ. ಹೀಗಾಗಿ ಅವು ಬಾಕಿ ಇವೆ ಎಂದರು. ರಾಜೆಂದ್ರ ಕುಮಾರ ಕಠಾರಿಯಾ ಮಾತನಾಡಿ, ಕಡತ ಇಲ್ಲದಿರುವುದು ಗಂಭೀರ ವಿಷಯ. ಕೂಡಲೇ ಈ ಕುರಿತು 15 ದಿನದಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಒಂದು ವೇಳೆ ಹಿಂದಿನ ಅಧಿಕಾರಿ-ಸಿಬ್ಬಂದಿಗಳು ಕಡತ ಒಪ್ಪಿಸದಿದ್ದಲ್ಲಿ ಅವರ ಮೇಲೆ ಕ್ರಮ ವಹಿಸಲಾಗುವುದು ಎಂದರು.

ಸುಳ್ಳು ದಾಖಲೆ ನೀಡಿ ನೊಂದಣಿ ಮಾಡಿಸಿದ ದಸ್ತಾವೇಜು ರದ್ದತಿಗೆ ಅವಕಾಶ:ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಕೊಟ್ಟಿ ದಾಖಲೆ‌ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳನ್ನು ಕೈಗೆತ್ತಿಕೊಂಡು ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ ಒದಗಿಸುವ ಕುರಿತು ಕಳೆದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಮುಂದಿನ 3-4 ತಿಂಗಳಲಿನಲ್ಲಿ ಗೆಜೆಟ್ ರೂಪದಲ್ಲಿ ಆದೇಶ ಹೊರಬೀಳಲಿದೆ. ಇದರಿಂದ ಕಂಡವರ ಅಸ್ತಿ ಕಬಳಿಸುವ ದಲ್ಲಾಳಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಹಿಂದೆಲ್ಲ ಸುಳ್ಳು ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡು ಆಸ್ತಿ ಕಬಳಿಕೆದಾರರು ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿದ್ದರು. ವಿಜಯಪುರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ. ಸುಳ್ಳು ದಾಖಲೆಗಳ ನೋಂದಣಿ ಗೊತ್ತಾದ ನಂತರ ಆಸ್ತಿ ಮಾಲೀಕರು ಸಿವಿಲ್‌ ನ್ಯಾಯಲಯ, ಉಚ್ಛ ನ್ಯಾಯಾಲಯ, ಸುಪ್ರೀಂ ಕೋರ್ಟ್ ಹೀಗೆ 5-6 ವರ್ಷ ನ್ಯಾಯಾಲಯಕ್ಕೆ ತಮ್ಮ ಆಸ್ತಿಗೆ ಅನಗತ್ಯ ಪರದಾಡಬೇಕಿತ್ತು. ಜಿಲ್ಲಾ ನೊಂದಣಾಧಿಕಾರಿಗಳಿಗೆ ಸುಳ್ಳು ದಸ್ತಾವೇಜು ರದ್ದುಪಡಿಸುವ ಅಧಿಕಾರ‌ ನೀಡಿದ್ದರಿಂದ ಸಾರ್ವಜನಿಕರಿಗೆ ಮುಂದಿನ ದಿನದಲ್ಲಿ ತ್ವರಿತ ನ್ಯಾಯಾಲಯ ಸಿಗಲು ಅನುಕೂಲವಾಗಲಿದೆ‌ ಎಂದರು.

ಇದನ್ನೂ ಓದಿ:ಬಿಬಿಎಂಪಿ ಫುಟ್ ಪಾತ್ ವ್ಯಾಪಾರಿಗಳ ತೆರವಿಗೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​

ABOUT THE AUTHOR

...view details